ಶಿವಮೊಗ್ಗ:- ಶಿವಮೊಗ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ–206ರ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಹಾಗೂ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಸಿದ್ದಲಿಂಗ ರೆಡ್ಡಿ ಮತ್ತು ಗ್ರಾಮ ಸಹಾಯಕ ರಾಜೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಓತಿಘಟ್ಟ ಗ್ರಾಮದ ಕೇಶವಮೂರ್ತಿ ಅವರು ತಮ್ಮ ಎರಿಟಿಗಾ ಕಾರನ್ನು ಕಳೆದ ಎರಡು ವರ್ಷಗಳಿಂದ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಬಾಡಿಗೆಗೆ ನೀಡಿದ್ದು, 2025ರ ನವೆಂಬರ್ ತಿಂಗಳ ಬಾಡಿಗೆ ಚೆಕ್ ನೀಡಲು ₹40,000 ಲಂಚ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಲಾಗಿದೆ.
ಈ ಕುರಿತು ಕೇಶವಮೂರ್ತಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಫೆಬ್ರವರಿ 14ರ ಸಂಜೆ ಸಿದ್ದಲಿಂಗ ರೆಡ್ಡಿ ಅವರ ಸೂಚನೆಯಂತೆ ಹೊಳಲೂರು ನಾಡಕಚೇರಿಯ ಗ್ರಾಮ ಸಹಾಯಕ ರಾಜೇಶ್, ಶಿವಮೊಗ್ಗದ ನೆಹರೂ ಸ್ಟೇಡಿಯಂ ಬಳಿ ಕೇಶವಮೂರ್ತಿ ಅವರಿಂದ ₹40,000 ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಚಂದ್ರಶೇಖರ್ ಬಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪೊಲೀಸ್ ನಿರೀಕ್ಷಕರು ಕೆ.ಪಿ. ರುದ್ರೇಶ್, ಗುರುರಾಜ್ ಮೈಲಾರ್, ವೀರಬಸಪ್ಪ ಎಲ್. ಕುಸಲಾಪುರ ಸೇರಿದಂತೆ ಸಿಬ್ಬಂದಿ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.



