ಬೆಳಗಾವಿ: ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಇ) ಮನೆ ಮೇಲೆ ಲೋಕಾಯುಕ್ತ ನಡೆಸಿದ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ನಗರದ ಆಂಜನೇಯ ನಗರ ಸೇರಿದಂತೆ ಏಳು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ಒಟ್ಟು 14 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಪ್ರಮಾಣದ ಆಸ್ತಿ ಕಂಡು ಅಧಿಕಾರಿಗಳೇ ಆಶ್ಚರ್ಯಗೊಂಡಿದ್ದಾರೆ.
ದಾಳಿ ವೇಳೆ ಡಿಯುಡಿಸಿ (DUDC) ಎಇಇ ಅಜಯಸಿಂಗ್ ರಜಪೂತ್ ಅವರ ಮನೆ, ಕಚೇರಿ ಹಾಗೂ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಲಾಗಿದೆ. ತನಿಖೆಯಲ್ಲಿ ಬೆಳಗಾವಿ ಸೇರಿದಂತೆ ಸವದತ್ತಿ, ಹುಕ್ಕೇರಿ ಮತ್ತು ಹುಬ್ಬಳ್ಳಿಯಲ್ಲಿ ಒಟ್ಟು 18 ನಿವೇಶನಗಳು ಪತ್ತೆಯಾಗಿವೆ.
ಇದಲ್ಲದೆ, ಸುಮಾರು 5.96 ಕೆಜಿ ಚಿನ್ನಾಭರಣ, 5 ಕೆಜಿ ಬೆಳ್ಳಿ, ಸುಮಾರು 3.12 ಕೋಟಿ ರೂ. ಬ್ಯಾಂಕ್ ಠೇವಣಿಗಳು, ಐಷಾರಾಮಿ ಕಾರು ಹಾಗೂ ಬೈಕ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹಿಸಿರುವ ಆರೋಪದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ. ಬ್ಯಾಂಕ್ ಲಾಕರ್ ಪರಿಶೀಲನೆ ಇನ್ನೂ ಬಾಕಿಯಿದ್ದು, ಹೆಚ್ಚಿನ ಅಕ್ರಮ ಆಸ್ತಿ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.



