ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಬುಧವಾರ ಶಿರಹಟ್ಟಿ ತಾಲೂಕಾ ಆಸ್ಪತ್ರೆಗೆ ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ ನೇತೃತ್ವದ ತಂಡ ಆಕಸ್ಮಿಕವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ಗರಂ ಆಗಿ ಅಲ್ಲಿಯ ಸಿಬ್ಬಂದಿಗಳಿಗೆ ಶಿಸ್ತು ಕ್ರಮದ ಕುರಿತು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್‌ಪಿ ವಿಜಯಕುಮಾರ ಬಿರಾದಾರ, ತಾಲೂಕಾ ಆಸ್ಪತ್ರೆಯಾಗಿದ್ದರೂ ಸಹ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ.
ಬಿಸಿ ನೀರಿನ ವ್ಯವಸ್ಥೆಯಿಲ್ಲ. ರೋಗಿಗಳಿಗೆ ಸಮರ್ಪಕ ಸ್ಥಳಾವಕಾಶವಿಲ್ಲದೆ ಕಾರಿಡಾರ್‌ನಲ್ಲೇ ಮಲಗಿದ್ದು ಕಂಡು ಬಂದಿದೆ. ಜೊತೆಗೆ ೨ ಜನ ಸಿಬ್ಬಂದಿಗಳು ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ತಡವಾಗಿ ಆಗಮಿಸುವ ವೈದ್ಯರು ಮತ್ತು ಸಿಬ್ಬಂದಿಗೂ ಎಚ್ಚರಿಕೆ ನೀಡಲಾಗಿದೆ. ಓರ್ವ ವೈದ್ಯ ಆಸ್ಪತ್ರೆಯಲ್ಲಿ ಔಷಧಿ ಇದ್ದರೂ ಸಹ ಹೊರಗಡೆ ಔಷಧಿ ತರುವಂತೆ ರೋಗಿಗೆ ಬರೆದುಕೊಟ್ಟಿದ್ದು ಸಹ ಕಂಡು ಬಂದಿತು. ಈ ಎಲ್ಲ ನ್ಯೂನತೆಗಳ ಬಗ್ಗೆ ಸವಿಸ್ತಾರವಾಗಿ ರಾಜ್ಯ ಲೋಕಾಯುಕ್ತರಿಗೆ ಶಿಸ್ತು ಕ್ರಮ ಜರುಗಿಸುವಂತೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಿಬ್ಬಂದಿಗಳಾದ ಎಚ್.ಸಿ. ಅಮರಶೆಟ್ಟರ, ನೈನಾಪೂರ ಮುಂತಾದವರು ಉಪಸ್ಥಿತರಿದ್ದರು.