ಗದಗ: ಭ್ರಷ್ಟಾಚಾರ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅಧಿಕಾರಿಯೊಬ್ಬರ ಮನೆಯಲ್ಲಿ ಅಚ್ಚರಿ ಮೂಡಿಸುವ ವಸ್ತುಗಳು ಪತ್ತೆಯಾಗಿವೆ.
ಶಿರಹಟ್ಟಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಕೆ. ಸುರಕೋಡ ಅವರಿಗೆ ಸಂಬಂಧಿಸಿದ ಆರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ಅಧಿಕಾರಿಯ ಮನೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸರ್ಕಾರದಿಂದ ನೀಡಲಾಗಿದ್ದ ಹಾಸಿಗೆ ಹಾಗೂ ಬೆಡ್‌ಶೀಟ್‌ಗಳು ಪತ್ತೆಯಾಗಿವೆ.
ಅಲ್ಲದೆ ಹಾಸ್ಟೆಲ್‌ನಲ್ಲಿ ಅಡುಗೆ ಮಾಡಲು ಬಳಸುವ ದೊಡ್ಡ ದೊಡ್ಡ ಪಾತ್ರೆಗಳು ಹಾಗೂ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ನೋಟ್‌ಪುಸ್ತಕಗಳು ಕೂಡ ಪತ್ತೆಯಾಗಿದ್ದು ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.
ತನಿಖೆಯಲ್ಲಿ ಸುರಕೋಡ ಅವರು ಶೇ.227 ಅಧಿಕ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ದಾಳಿಯಲ್ಲಿ 13 ಲಕ್ಷ ರೂಪಾಯಿ ಮೌಲ್ಯದ ಆರು ನಿವೇಶನಗಳು, 45 ಲಕ್ಷ ರೂಪಾಯಿ ಮೌಲ್ಯದ ಮನೆ ಹಾಗೂ 80.77 ಲಕ್ಷ ರೂಪಾಯಿ ಮೌಲ್ಯದ 29 ಎಕರೆ ಜಮೀನು ಸೇರಿದಂತೆ ಒಟ್ಟು 1.38 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳು ಸಿಕ್ಕಿವೆ.
ಇದರ ಜೊತೆಗೆ 89 ಸಾವಿರ ರೂಪಾಯಿ ನಗದು, 23.21 ಲಕ್ಷ ರೂಪಾಯಿ ಮೌಲ್ಯದ 152 ಗ್ರಾಂ ಚಿನ್ನಾಭರಣ, 2.05 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಹಾಗೂ 31.40 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಪತ್ತೆಯಾಗಿದ್ದು, ಒಟ್ಟು 1.82 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.



