ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್‌ಡಿಎ ಸತೀಶ್ ರಾಠೋಡ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಭೂ ದಾಖಲೆ ಸಂಬಂಧಿತ ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟು, ಫೋನ್‌ಪೇ ಮೂಲಕ ₹10,000 ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲಂಚ ನೀಡಿದವರು ಜೇವರ್ಗಿ ತಾಲ್ಲೂಕಿನ ಶಿವಕುಮಾರ್ ಹೆಗಡೆ ಎನ್ನಲಾಗಿದೆ.
ಶಿವಕುಮಾರ್ ಹೆಗಡೆ ಅವರ ಜಮೀನಿನ ಪಹಣಿಯಲ್ಲಿ ‘ಸರ್ಕಾರಿ ಜಮೀನು’ ಎಂದು ನಮೂದಾಗಿದ್ದ ದಾಖಲೆಯನ್ನು ತೆಗೆಯಲು ಎಫ್‌ಡಿಎ ಸತೀಶ್ ರಾಠೋಡ್ ಲಂಚ ಕೇಳಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.



