ಬೆಂಗಳೂರು/ಮೈಸೂರು/ದಾವಣಗೆರೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸಮನ್ವಯಿತ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆದ ಈ ಕಾರ್ಯಾಚರಣೆ ಗಮನಸೆಳೆದಿದೆ.
PWD ಚೀಫ್ ಇಂಜಿನಿಯರ್ ಪುರುಷೋತ್ತಮ ದಾಸ್ ಅವರಿಗೆ ಸಂಬಂಧಿಸಿದಂತೆ ಒಟ್ಟು 11 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಮೈಸೂರಿನಲ್ಲಿ 5 ಕಡೆ ಹಾಗೂ ಬೆಂಗಳೂರಿನಲ್ಲಿ 6 ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದೆ. ಆಸ್ತಿ ವಿವರಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೋಧನೆ ಮುಂದುವರಿದಿದೆ.
ಇದೇ ವೇಳೆ, ದಾವಣಗೆರೆ ಹಾಗೂ ಶಿವಮೊಗ್ಗದಲ್ಲೂ ಲೋಕಾಯುಕ್ತ ದಾಳಿ ವಿಸ್ತರಿಸಲಾಗಿದೆ. ದಾವಣಗೆರೆಯ ಬೆಸ್ಕಾಂ ಸಿವಿಲ್ ವಿಭಾಗದ ಇಂಜಿನಿಯರ್ ಆರ್.ಹೆಚ್. ಅರ್ಜುನ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಆದಾಯ ಮೀರಿ ಅಪಾರ ಪ್ರಮಾಣದ ಆಸ್ತಿ ಗಳಿಸಿರುವ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದ ತಂಡ ದಾವಣಗೆರೆ ನಗರದ ನಿಟ್ಟುವಳ್ಳಿಯಲ್ಲಿರುವ ಅರ್ಜುನ್ ಅವರ ವಾಸಸ್ಥಳ, ಕಚೇರಿ ಹಾಗೂ ಶಿವಮೊಗ್ಗದ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಶಿವಮೊಗ್ಗದ ಮನೆಯಲ್ಲಿ ಆಸ್ತಿ ದಾಖಲೆಗಳು ಹಾಗೂ ಚಿನ್ನ-ಬೆಳ್ಳಿ ಪತ್ತೆಯಾಗಿದ್ದು, ಇನ್ನಷ್ಟು ದಾಖಲೆಗಳಿಗಾಗಿ ಶೋಧ ಮುಂದುವರಿದಿದೆ.



