ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲವು ಅಧಿಕಾರಿಗಳು ದೇವಸ್ಥಾನಗಳಿಗೆ ಸೇರಬೇಕಾದ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಈ ಭ್ರಷ್ಟಾಚಾರವನ್ನು ಕರ್ನಾಟಕ ಮಂದಿರ ಮಹಾಸಂಘವು ತೀವ್ರವಾಗಿ ಖಂಡಿಸುವುದರೊಂದಿಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಗದಗಿನಲ್ಲಿ ಮಂದಿರ ಮಹಾಸಂಘದ ಸದಸ್ಯರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಇಲಾಖೆಯ ಮುದ್ರೆ ನಕಲಿ ಮಾಡಿ, ಧಾರ್ಮಿಕ ದತ್ತಿ ಇಲಾಖೆಯ 60 ಲಕ್ಷ ರೂಪಾಯಿಗಳನ್ನು ತನ್ನ ಹೆಂಡತಿ ಮತ್ತು ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಲಿಂಗಸುಗೂರಿನ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕರು ದೇವಸ್ಥಾನಗಳ ಅರ್ಚಕರಿಗೆ ಮೀಸಲಿಟ್ಟ ಹಣವನ್ನು ತನ್ನ ಹೆಂಡತಿ, ಮಕ್ಕಳ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ.
ಈ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ವಿಶೇಷ ತನಿಖಾ ತಂಡವನ್ನು ನೇಮಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ಮಲ್ಲಿಕಾರ್ಜುನ ಸಂತೋಜಿ, ನಾರಾಯಣ ಜನಿವಾರದ, ಸಂಜೀವ ಚವ್ಹಾಣ, ಅನಿಲ ಇರಕಲ್, ರಾಣಿ ಚಂದಾವರಿ, ಅನುಶ್ರೀ ಮುಧೋಳ, ರೂಪಾ ಹೂವಿನಹಳ್ಳಿ ಮುಂತಾದವರಿದ್ದರು.