HomeGadag Newsನಿರಾಕಾರ ಸ್ವರೂಪದ ಚೇತನಶಕ್ತಿಯೇ ಶಿವ ಪರಮಾತ್ಮ

ನಿರಾಕಾರ ಸ್ವರೂಪದ ಚೇತನಶಕ್ತಿಯೇ ಶಿವ ಪರಮಾತ್ಮ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಣ್ಣಿಗೆ ಕಾಣದ, ಭಾವಕ್ಕೆ ಮೀರಿದ, ಆದಿ-ಅಂತ್ಯವಿಲ್ಲದ ನಿರಾಕಾರ ಸ್ವರೂಪದ ಚೇತನಶಕ್ತಿಯೇ ಶಿವಪರಮಾತ್ಮ. ಶಿವರಾತ್ರಿಯ ಶುಭ ಘಳಿಗೆಯಲ್ಲಿ ಶಿವನನ್ನು ಶ್ರದ್ಧೆ, ಭಕ್ತಿ, ತನ್ಮಯತೆಯಿಂದ ಧ್ಯಾನಿಸಿದರೆ ದೇಹ ಹಾಗೂ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಹೂವಿನಶಿಗ್ಲಿ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಅವರು ಭಾನುವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ, ಸಾಂಸ್ಕೃತಿಕ, ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನವಾಗಿದೆ. ಅಜ್ಞಾನ ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಬದುಕಿನಲ್ಲಿ ಬೆಳಗಿಸು ಎಂದು ಶಿವನನ್ನು ಉಪವಾಸ, ಜಪ-ತಪ, ಪೂಜೆ, ಸ್ಮರಣೆ, ಭಜನೆಯ ಮೂಲಕ ಪ್ರಾರ್ಥಿಸುವ ಶುಭ ದಿನವೇ ಶಿವರಾತ್ರಿ. ಶಿವರಾತ್ರಿ ದಿನ ವಿಶೇಷವಾಗಿ ಶಿವ ದೇಗುಲಗಳಲ್ಲಿ ಪೂಜೆ, ಪ್ರಾರ್ಥನೆ, ಭಜನೆ, ಮಂತ್ರ, ಹೋಮ, ಯಾಗದ ಮೂಲಕ ಅಂತರಾತ್ಮಕ್ಕೆ ಶಿವನ ಇರುವಿಕೆಯ ಅರಿವಾಗುತ್ತದೆ ಎಂದರು.

ಪಿಎಸ್‌ಐ ನಾಗರಾಜ ಗಡಾದ ಮಾತನಾಡಿ, ನಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ವಿಶೇಷವಾದ ಅರ್ಥವಿದ್ದು, ತಾಯಂದಿರು ಮಕ್ಕಳೊಂದಿಗೆ ಪಾಲ್ಗೊಳ್ಳಬೇಕು. ತನ್ಮೂಲಕ ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಅವರಲ್ಲೂ ನಮ್ಮ ಧರ್ಮ, ಸಂಸ್ಕಾರ, ಆಚರಣೆ, ಸಂಪ್ರದಾಯಗಳ ಬಗ್ಗೆ ಪೂಜ್ಯನೀಯ ಭಾವನೆ ಮೂಡಿಸಬೇಕು ಎಂದರು.

ಯುವ ಮುಖಂಡರಾದ ಆನಂದ ಗಡ್ಡದೇವರಮಠ ಹಾಗೂ ಸುನೀಲ ಮಹಾಂತಶೆಟ್ಟರ ಮಾತನಾಡಿ, ದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಪ್ರತೀಕವಾಗಿವೆ. ಇಂದಿನ ತಂತ್ರಜ್ಞಾನದ ಯುಗದಲ್ಲೂ ಇವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಡಾ. ಸುಧಾಮೂರ್ತಿಯವರು ದೇವಸ್ಥಾನ ಜೀರ್ಣೋದ್ಧಾರಗೊಳಿಸಿದ ನಂತರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಭಕ್ತರ ಸಂಖ್ಯೆ ಹೆಚ್ಚಿದೆ. ಪುಲಿಗೆರೆ ಉತ್ಸವದಂತೆ ಶಿವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವು ಸಹ ಮೆರಗು ನೀಡುವಂತೆ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಸೋಮೇಶ್ವರ ದೇವಸ್ಥಾನದ ಅರ್ಚಕರ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ದಿಗಂಬರ ಪೂಜಾರ, ಉಪಾಧ್ಯಕ್ಷರಾಗಿ ರಾಘವೇಂದ್ರ ಪೂಜಾರ, ಕಾರ್ಯದರ್ಶಿಯಾಗಿ ಸಮೀರ ಪೂಜಾರ ಹಾಗೂ ಖಜಾಂಚಿಯಾಗಿ ಕೃಷ್ಣ ಪೂಜಾರ ಅವರ ಅಧಿಕಾರ ಪದಗ್ರಹಣ ನೆರವೇರಿತು.

ಇದೇ ಸಂದರ್ಭದಲ್ಲಿ ಡಾ. ನಿಂಗನಗೌಡ ಚ.ಪಾಟೀಲ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವರ ಕುರಿತು ರಚಿಸಿದ `ತಿರುಳ್‌ಗನ್ನಡನಾಡು ಪುಲಗೆರೆಯ ಶ್ರೀ ಸೋಮೇಶ್ವರ ಮಹಿಮೆ’ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ಸೋಮೇಶ್ವರ ದೇವಸ್ಥಾನ ಅರ್ಚಕರ ಸಮಿತಿ ನೂತನ ಅಧ್ಯಕ್ಷ ದಿಗಂಬರ ಪೂಜಾರ ವಹಿಸಿದ್ದರು. ವೇದಿಕೆಯಲ್ಲಿ ಸೋಮೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಅರ್ಚಕರಾದ ಸೋಮನಾಥ ಪೂಜಾರ, ರಾಘವೇಂದ್ರ ಪೂಜಾರ, ನಾಗರಾಜ ಪೂಜಾರ, ಚಿಕ್ಕರಸಯ್ಯ ಪೂಜಾರ, ಕೃಷ್ಣ ಪೂಜಾರ, ಗುರುರಾಜ ಪೂಜಾರ ಮುಂತಾದವರಿದ್ದರು. ಶ್ವೇತಾ ಪೂಜಾರ, ಅಲಕನಂದಾ ಕುಲಕರ್ಣಿ, ದರ್ಶಿನಿ ಪೂಜಾರ ನಿರೂಪಿಸಿದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ ಶಿಕ್ಷಕ ಕಲಾವಿದ, ಸಂಗೀತ ಶಿಕ್ಷಕ ಡಾ. ಅರ್ಜುನ ವಠಾರ ಅವರಿಂದ ಶಾಸ್ತ್ರೀಯ ಸಂಗೀತ, ಗೋಕಾಕದ ಪಂ. ನಟರಾಜ ಮಹಾಜನ ಅವರಿಂದ ವಾದ್ಯರಹಿತ ಸಂಗೀತ ಸೇವೆ ನಡೆಯಿತು. ಸ್ಥಳೀಯ ವೇದಿಕಾ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳು, ಬೆಂಗಳೂರಿನ ವಿ. ದೀಪಿಕಾ ಹೆಚ್.ಎಸ್, ಅನುಶ್ರೀ ಆರ್, ಗದಗನ ನಿಮಿಷಾಂಬಾ ಜ್ಯೋತಿಶ್ರೀ ನಾಟ್ಯ ಅಕಾಡೆಮಿ, ಕುಂದಗೋಳದ ನಾಟ್ಯ ತಂಡದವರಿಂದ ನಾಟ್ಯ ವೈಭವ ಮೇಳೈಸಿತ್ತು. ಹುಬ್ಬಳ್ಳಿಯ ಶಿವಾ ತಂಡದವರ ಗಂಗಾರತಿ ವಿಶೇಷ ಕಾರ್ಯಕ್ರಮ ಜನಮನ್ನಣೆಗೆ ಪಾತ್ರವಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!