ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ಸರಣಿಯಾಗಿ ನಡೆದ ಲಾರಿ, ಟಿಪ್ಪರ್, ಟ್ರ‍್ಯಾಕ್ಟರ್‌ಗಳ ಬ್ಯಾಟರಿಗಳ ಕಳವು, ಬೈಕ್, ರೈತರ ಪರಿಕರಗಳ ಕಳವು ಪ್ರಕರಣಗಳು ಜನತೆಯನ್ನು ಬೆಚ್ಚಿ ಬೀಳಿಸಿದೆ.
ಘಟನೆಯಿಂದ ಗ್ರಾಮೀಣ ಭಾಗದಲ್ಲಿ ಜಮೀನುಗಳಿಗೆ ತೆರಳಲು ರೈತ ಮಹಿಳೆಯರು ಅಂಜುವ ಸ್ಥಿತಿ ಉಂಟಾಗಿದೆ. ಗ್ರಾಮಗಳಲ್ಲಿ ಯಾವಾಗ, ಎಲ್ಲಿ, ಏನಾಗುತ್ತದೆಯೋ ಎಂಬ ಭಯ ಡಂಬಳ ಗ್ರಾಮದ ಜನರನ್ನು ಅವರಿಸಿದೆ. ಮಾರಕ ಅಸ್ತ್ರಗಳನ್ನು ಹಿಡಿದುಕೊಂಡು ಬರುವ ದರೋಡೆಕೋರರಿಂದ ಅಂಜಿರುವ ಜನರು ತಮ್ಮ ರಕ್ಷಣೆಗೆ ತಾವೇ ಸ್ವಯಂ ತಂಡಗಳನ್ನು ಮಾಡಿಕೊಳ್ಳಬೇಕು ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿದೆ.
ಸೋಲಾರ್ ಕೆಲಸಕ್ಕೆ, ಗಾಳಿ ವಿದ್ಯುತ್ ಯಂತ್ರಗಳನ್ನು ಅಳವಡಿಸಲು ಬಂದಿರುವ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ತೆರಳುವವರನ್ನೂ ಜನ ಕಳ್ಳರೆಂದು ಅನುಮಾನಿಸತೊಡಗಿದ್ದಾರೆ. ಸಾಕು ಪ್ರಾಣಿಗಳಾದ ಕುರಿ, ಆಡು, ಆಕಳುಗಳ ಕಳ್ಳತನ ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಪಕ್ಕದ ಪೆಟ್ಟಿಗೆ ಅಂಗಡಿಗಳಲ್ಲಿಯೂ ಕಳ್ಳತನ ಜರುಗುತ್ತಿದ್ದು, ದರೋಡೆಕೋರರನ್ನು ಮಟ್ಟಹಾಕುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎನ್ನುವ ಮಾತುಗಳು ಗ್ರಾಮದಲ್ಲಿ ಹರಡುತ್ತಿದೆ.
ಟ್ರ‍್ಯಾಕ್ಟರ್, ಟಿಪ್ಪರ್, ಲಾರಿಗಳ ಬ್ಯಾಟರಿ, ಬೊಲೆರೊ ಗಾಡಿಯ ಟೈರ್ ಕಳ್ಳತನ ಮಾಡಿರುವ ಕಳ್ಳರನ್ನು ಹಿಡಿದು ನ್ಯಾಯ ಒದಗಿಸಬೇಕು. ಗ್ರಾಮ ಪಂಚಾಯಿತಿ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಶೀಘ್ರದಲ್ಲಿಯೇ ಕಳ್ಳರನ್ನು ಪತ್ತೆಹಚ್ಚಲಾಗುವುದು. ಜನರು ಭಯ ಬೀಳುವ ಅವಶ್ಯಕತೆ ಇಲ್ಲ. ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಲಿದೆ ಎಂದಿದ್ದಾರೆ.
ಎಂಟು ದಿನಗಳ ಹಿಂದೆ ಅನ್ನಭಾಗ್ಯ ಅಕ್ಕಿ ಲಾರಿಗಳ, ಟಿಪ್ಪರ್‌ಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದರು. ಸಾಲ ಮಾಡಿ ನಾನು ನಡೆಸುವ ಲಾರಿಗೆ ಹೊಸ ಬ್ಯಾಟರಿ ತಂದು ಹಾಕಿದ್ದೆ. ಇದೀಗ ಪುನಃ ಬ್ಯಾಟರಿ ಕಳ್ಳತನ ಮಾಡಿದ್ದಾರೆ. ಇದರಿಂದ ಬಹಳ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇನೆ. ಪೊಲೀಸರು ನನಗೆ ನ್ಯಾಯ ಒದಗಿಸಿಕೊಡಬೇಕು.
-
ಫಕೀರಪ್ಪ ತಳವಾರ.
ಅನ್ನಭಾಗ್ಯ ಅಕ್ಕಿ ಲಾರಿ ಚಾಲಕ.



