ಮಂಡ್ಯ:- ಸಕ್ಕರೆ ನಾಡು ಮಂಡ್ಯದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗಳು ಸಾವನ್ನಪ್ಪಿದ್ದ 20 ದಿನದ ಬಳಿಕ ತಾಯಿಯೂ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ಜರುಗಿದೆ.
21 ವರ್ಷದ ವಿಜಯಲಕ್ಷ್ಮಿ ಹಾಗೂ ತಾಯಿ ಲಕ್ಷ್ಮಿ ಮೃತರು. ಮೃತ ವಿಜಯಲಕ್ಷ್ಮಿ ಕಳೆದ ಕೆಲವು ವರ್ಷಗಳಿಂದ ಹರಿಕೃಷ್ಣ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದಳು.
ಪ್ರೀತಿಸುವ ನೆಪದಲ್ಲಿ ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು. ಆದರೆ ಇತ್ತೀಚಿಗೆ ಬೇರೆ ಹುಡುಗಿಯರ ಜೊತೆ ಹರಿಕೃಷ್ಣ ಓಡಾಡಲು ಶುರುಮಾಡಿದ್ದ. ಈ ಬಗ್ಗೆ ಪ್ರಶ್ನಿಸಿದ್ದ ಯುವತಿ, ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದ್ದಳು. ಆಗ ಮದುವೆಗೆ ನಿರಾಕರಿಸಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದ್ದ.
ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ವಿಜಯಲಕ್ಷ್ಮಿ ಕಳೆದ 20 ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ತಂದೆ ನಂಜುಂಡೇಗೌಡ ಮಂಡ್ಯ ಗ್ರಾಮಾಂತರ ಠಾಣೆಗೆ ತೆರಳಿದ್ದರು. ಈ ವೇಳೆ ದೂರು ಕೊಟ್ಟು ನ್ಯಾಯ ಕೋರಲು ಹೋಗಿದ್ದವರ ಮೇಲೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇತ್ತ ಮಗಳ ಸಾವಿಗೆ ನ್ಯಾಯವೂ ಇಲ್ಲ, ನಮಗೆ ನೆಮ್ಮದಿಯೂ ಇಲ್ಲ ಎಂದು ನೊಂದ ತಾಯಿ ಲಕ್ಷ್ಮಿ ಗುರುವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಸಾಗಿಸಲು ಬಿಡದೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದ್ದಾರೆ.