ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯಲ್ಲಿ ಜಿಮ್ ಕೇಂದ್ರವನ್ನು ಸುತ್ತುವರಿದ ವಿವಾದ ಕಾನೂನು-ಸುವ್ಯವಸ್ಥೆಯ ಪ್ರಶ್ನೆಯಾಗಿ ತೀವ್ರಗೊಂಡಿದ್ದು, ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿದೆ.
ಜಿಮ್ ಟ್ರೈನರ್ ಸಮೀರ್ ವಿರುದ್ಧ “ಲವ್ ಜಿಹಾದ್” ಆರೋಪ ಹೊರಿಸಿ, ಸಂಘಟನೆಗಳ ಕಾರ್ಯಕರ್ತರು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಯುವಕ ಮತ್ತು ಯುವತಿಯ ಕುಟುಂಬಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಪರಸ್ಪರ ಮನೆಗಳಿಗೆ ತೆರಳಿ ಗಲಾಟೆ ನಡೆಸಿದ ಘಟನೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಯುವತಿಯ ಮನೆಗೆ ಯುವಕನ ಕುಟುಂಬದವರು ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಎರಡೂ ಕುಟುಂಬಗಳು ಸಂಘರ್ಷಕ್ಕೆ ಇಳಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಎರಡೂ ಕಡೆಯವರ ನಡುವೆ ಗಲಾಟೆ ನಡೆದಿರುವುದನ್ನು ದೃಢಪಡಿಸಿ, ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ನಡುವೆ, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಳೆ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿ, ಟ್ರೈನರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಯುವಕನ ಸಹೋದರಿ, ಯುವತಿ ಮತ್ತು ತನ್ನ ಸಹೋದರ ಕಳೆದ ಮೂರು ವರ್ಷಗಳಿಂದ ಪರಸ್ಪರ ಪರಿಚಯದಲ್ಲಿದ್ದು ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದು, ಈ ಸಂಬಂಧದ ಬಗ್ಗೆ ಯುವತಿಯ ಮನೆಯವರಿಗೆ ತಿಳಿದಿತ್ತು ಎಂದು ತಿಳಿಸಿದ್ದಾರೆ.



