ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀಗುರುವಿನಿಂದ ಶಿವದೀಕ್ಷಾ ಸಂಪನ್ನರಾಗಿ ಇಷ್ಟಲಿಂಗ ಪಡೆದು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ. ಲಿಂಗದೀಕ್ಷೆಯು ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳುವ ಚೈತನ್ಯ ಶಕ್ತಿ ಸಾಧನವಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಭಾನುವಾರ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಶಿವಲಿಂಗ ಪೂಜೆ, ಜಂಗಮ ವಟುಗಳಿಗೆ ಅಯ್ಯಾಚಾರ-ಲಿಂಗದೀಕ್ಷೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಶ್ರೀ ಗುರು ಶಿಷ್ಯ ಸದ್ಭಕ್ತರಿಗೆ ಲಿಂಗಧಾರಣೆ ಮಾಡಿ, ಮಂತ್ರ ಸಂಸ್ಕಾರದ ಮೂಲಕ ಶುದ್ಧೀಕರಣಗೊಳಿಸಿ ಜ್ಞಾನೋಪದೇಶ ಮಾಡಿ, ಈ ಲಿಂಗವನ್ನು ಪ್ರಾಣಕ್ಕಿಂತ ಮೇಲಾಗಿ ಪ್ರೀತಿಸಿ, ಪೂಜಿಸಿದಾಗ ಮಾತ್ರ ಲಿಂಗದೀಕ್ಷೆಗೆ ಅರ್ಥ ಬರುತ್ತದೆ. ವೀರಶೈವ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ವಿಶಿಷ್ಟ ಸ್ಥಾನವಿದ್ದು, ಲಿಂಗದೀಕ್ಷಾ ಮತ್ತು ಅಯ್ಯಾಚಾರ ಸಂಸ್ಕಾರಗಳು ಅತ್ಯಂತ ಮಹತ್ವದ್ದಾಗಿದೆ. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ.
ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ. ಲಿಂ. ಗಂಗಾಧರ ಶ್ರೀಗಳು ಮಹಾಶಿವರಾತ್ರಿಗೆ ಮಾಡುತ್ತಿದ್ದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಲಿಂ. ಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಕ್ಷೇತ್ರದಲ್ಲಿ ತ್ರಿಕೋಟಿಲಿಂಗ ಸ್ಥಾಪನೆ ಕಾರ್ಯ ನಡೆದಿದ್ದು ಈ ಭಾಗದ ಶಿವಭಕ್ತರಿಗೆ ಕಾಶಿ ಕ್ಷೇತ್ರ ದರ್ಶನವಾದಂತೆ ಎಂದು ಹೇಳಿದರು.
ಲಕ್ಷ್ಮೇಶ್ವರ, ಕುಂದಗೋಳ, ಶಿಗ್ಗಾಂವ ತಾಲೂಕಿನ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. 50ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಲಿಂಗದೀಕ್ಷೆ ಕಾರ್ಯ ನೆರವೇರಿಸಲಾಯಿತು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅಪಾರ ಭಕ್ತರು ಲಿಂ. ವೀರಗಂಗಾಧರ ಜಗದ್ಗುರುಗಳ ಗದ್ದುಗೆ ದರ್ಶನ ಪಡೆದು ತ್ರಿಕೋಟಿ ಶಿವಲಿಂಗ ಸ್ಥಾಪನೆಗಾಗಿ ಸಿದ್ಧಗೊಂಡಿರುವ ಶಿವಲಿಂಗ ಪೂಜೆ ಮಾಡಿದರು. ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಮಾನವ ಧರ್ಮ ಮಹಾಮಂಟಪ, ಅಡ್ಡಪಲ್ಲಕ್ಕಿ ಕಲಾ ಮಂಟಪಗಳು ತಳಿರು ತೋರಣ, ಹೂವು, ದೀಪಾಲಂಕಾರದಿಂದ ಕಂಗೊಳಿಸಿದವು.



