ಕಲಬುರ್ಗಿ:-ಕಲಬುರಗಿಯ ಮೇಳಕುಂದಾ (ಬಿ) ಗ್ರಾಮದಲ್ಲಿ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆ ಹಾಗೂ ಕುಟುಂಬಸ್ಥರು ಸೇರಿ ಹತ್ಯೆ ಮಾಡಿ, ಸುಟ್ಟು ಹಾಕಿರುವ ಘಟನೆ ಜರುಗಿದೆ.
ಕವಿತಾ ಕೊಳ್ಳೂರ (18) ಕೊಲೆಯಾದ ಯುವತಿ. ಆಕೆಯ ತಂದೆ ಶಂಕರ ಕೊಳ್ಳೂರ ಹಾಗೂ ಸಂಬಂಧಿಗಳಾದ ಶರಣು, ದತ್ತು ಚೋಳಾಭರ್ಧಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಈ ಸಂಬಂಧ ಫರಹತಾಬಾದ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ ಕವಿತಾ, ಅದೇ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಪಿಯುಸಿ ಓದಲು ಕಲಬುರಗಿಗೆ ಬಂದಿದ್ದ ವೇಳೆ ಇವರಿಬ್ಬರ ನಡುವೆ ಪರಿಚಯವಾಗಿತ್ತು. ಪ್ರೀತಿ ವಿಚಾರ ಮನೆಯವರಿಗೆ ತಿಳಿದಾಗ, ಕಾಲೇಜು ಬಿಡಿಸಿ ಮನೆಗೆ ಕರೆಸಿದ್ದರು. ಆದರೆ ಕವಿತಾ ಮದುವೆ ಮಾಡಲು ಪಟ್ಟು ಹಿಡಿದಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಮಧ್ಯರಾತ್ರಿ ಮನೆಯವರು ಸೇರಿ ಕವಿತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಕೀಟನಾಶಕ ಸುರಿದು ಆತ್ಮಹತ್ಯೆ ರೀತಿ ಬಿಂಬಿಸಲು ಯತ್ನಿಸಿದ್ದರು. ಬೆಳಗ್ಗೆ ಗ್ರಾಮದ ಹೊರವಲಯದ ಜಮೀನಿಗೆ ದೇಹವನ್ನು ಕೊಂಡೊಯ್ದು ಸುಟ್ಟಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.