ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ LPG ಕೊರತೆ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಒಂದು ವಾರ ಸಹಕಾರ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಗ್ಯಾಸ್ ಸಮಸ್ಯೆ ಕುರಿತು ಮಾತನಾಡಿದ ಅವರು, ಗೃಹ ಬಳಕೆಯ ಡೊಮೆಸ್ಟಿಕ್ ಸಿಲಿಂಡರ್‌ಗಳಿಗೆ ಯಾವುದೇ ಕೊರತೆ ಇಲ್ಲ. ಅಗತ್ಯವಿರುವಷ್ಟು ಸರಬರಾಜು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಆದರೆ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಕೇಂದ್ರ ಸರ್ಕಾರ 20% ಮಾತ್ರ ವಿತರಣೆ ಮಾಡಲು ಸೂಚಿಸಿದೆ. ಪ್ರಸ್ತುತ ಸುಮಾರು 9 ಸಾವಿರ ಕಮರ್ಷಿಯಲ್ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಅವುಗಳನ್ನು ಆಸ್ಪತ್ರೆಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಸೀಮಿತ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ನೀಡಲು ಸಾಧ್ಯವಾಗುತ್ತಿದ್ದು, ಇದರಿಂದ ಸಮಸ್ಯೆ ಎದುರಾಗಿದೆ. ಹೀಗಾಗಿ ಒಂದು ವಾರ ಸಹಿಸಿಕೊಳ್ಳುವಂತೆ ಹೋಟೆಲ್ ಮಾಲೀಕರಿಗೆ ಮನವಿ ಮಾಡಿದರು.
ಇರಾನ್‌ನ ಪರಿಸ್ಥಿತಿ ಹಿನ್ನೆಲೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ 16 ಹಡಗುಗಳು ಕ್ಯೂನಲ್ಲಿ ಇದ್ದು, ಅವು ಬಂದ ನಂತರ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಒಂದು ವಾರದ ಬಳಿಕ ಸುಮಾರು 15 ಸಾವಿರ ಸಿಲಿಂಡರ್ ಸಂಗ್ರಹಿಸಿ, ಹೋಟೆಲ್ ಅಸೋಸಿಯೇಷನ್ ಜೊತೆ ಚರ್ಚಿಸಿ ಹಂಚಿಕೆ ಮಾಡುವ ಯೋಜನೆ ಇದೆ ಎಂದು ಸಚಿವರು ಹೇಳಿದರು.



