ಮಂಗಳೂರು: ದೇಶದಲ್ಲಿ ಎದುರಾಗಿರುವ LPG ಗ್ಯಾಸ್ ಸಮಸ್ಯೆ ಮತ್ತು ಕಚ್ಚಾ ತೈಲ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಭಾರತವು ಹಗಲಿರುಳು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ, ನವಮಂಗಳೂರು ಬಂದರಿಗೆ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ.
‘ಅಪೋಲೋ ಓಷನ್’ ಹೆಸರಿನ ಹಡಗು ಸುಮಾರು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಸಾಗಿಸಿಕೊಂಡು ಮಂಗಳೂರಿಗೆ ತಲುಪಿದ್ದು,
ಇಳಿಸುವ ಕಾರ್ಯಾಚರಣೆಗಳು ಪ್ರಾರಂಭಗೊಂಡಿವೆ. ಈ ಮೊದಲು ಕತಾರ್‌ನ ರಾಸ್ ಲಫಾನ್‌ನಿಂದ 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಸರಕು ಹಡಗು ಮಾ.16ರಂದು ಗುಜರಾತಿನ ಮುದ್ರಾ ಬಂದರಿಗೆ ತಲುಪಿತ್ತು. ನಂತರ ಈ ಹಡಗು ಮಂಗಳೂರಿಗೆ ಬರಬೇಕಾಗಿದ್ದರೂ, ಅದರಲ್ಲಿದ್ದ ಸಂಪೂರ್ಣ ಸರಕು ಮುದ್ರಾ ಬಂದರಲ್ಲೇ ಇಳಿಸಲಾಗಿತ್ತು.
ಅಲ್ಲಿ ಸುಮಾರು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ‘ಅಪೋಲೋ ಓಷನ್’ ಹಡಗಿಗೆ ವರ್ಗಾಯಿಸಿ ಮಂಗಳೂರಿಗೆ ಕಳುಹಿಸಲಾಗಿದೆ. ಇನ್ನೂ ಎರಡು ಕಚ್ಚಾ ತೈಲ ಟ್ಯಾಂಕರ್‌ಗಳು ಶೀಘ್ರದಲ್ಲೇ ಮಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.



