ಬೀದರ್: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜ್ಯ ಸೇರಿದಂತೆ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ಉಂಟಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯದಿಂದಲೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಬೀದರ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲು ಏಕಾಏಕಿ ಡೊಮೆಸ್ಟಿಕ್ ಹಾಗೂ ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಸಮಸ್ಯೆ ಇಲ್ಲ ಎಂದರೆ ಅಗತ್ಯ ಸರಕುಗಳ ಕಾಯ್ದೆ (ESMA) ಯಾಕೆ ಜಾರಿಗೊಳಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.
ಹೋಟೆಲ್ಗಳಲ್ಲಿ ಸಿಲಿಂಡರ್ ಕೊರತೆ ಉಂಟಾಗಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಸ್ಟೆಲ್ಗಳಲ್ಲೂ ಅಡುಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎಂದು ಹೇಳಿದರು.
ಸಿಲಿಂಡರ್ ಕೊರತೆಯಿಂದ ಕೆಲವು ಕೈಗಾರಿಕೆಗಳೂ ಸಮಸ್ಯೆ ಎದುರಿಸುತ್ತಿವೆ. ಪುಣೆಯ ಟಾಟಾ ಕಾರು ತಯಾರಿಕಾ ಘಟಕದಲ್ಲಿ ಉತ್ಪಾದನೆ ಸುಮಾರು 60 ಶೇಕಡಾ ಮಟ್ಟಕ್ಕೆ ಕುಸಿದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದಕ್ಕೆ ಯಾರು ಹೊಣೆ? ಬೇರೆ ದೇಶಗಳಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿಲ್ಲ. ನಮ್ಮ ದೇಶದಲ್ಲೇ ಯಾಕೆ ಈ ಪರಿಸ್ಥಿತಿ ಉಂಟಾಗಿದೆ? ಯುದ್ಧ ನಮ್ಮ ದೇಶದಲ್ಲಿ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರು.
ಇರಾನ್ನಿಂದ ಕಚ್ಚಾ ತೈಲವನ್ನು ರಷ್ಯಾ ಮತ್ತು ಚೀನಾ ಹಡಗುಗಳು ಸಾಗಿಸುತ್ತಿವೆ. ಆದರೆ ಭಾರತದ ಹಡಗುಗಳ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದರು.
ಟ್ರಂಪ್ ಸೇರಿದಂತೆ ಹಲವು ರಾಷ್ಟ್ರ ನಾಯಕರನ್ನು ಮೋದಿ ತಮ್ಮ ಉತ್ತಮ ಸ್ನೇಹಿತರು ಎಂದು ಹೇಳುತ್ತಾರೆ. ಬಿಜೆಪಿ ನಾಯಕರು ಸಿಲಿಂಡರ್ ಕೊರತೆ ಇಲ್ಲ ಎನ್ನುತ್ತಾರೆ. ಹಾಗಾದರೆ ಅವರು ಸ್ವತಃ ಸಿಲಿಂಡರ್ ಬುಕ್ ಮಾಡಿ ತೋರಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.



