ಬೆಂಗಳೂರು: ನಗರದಲ್ಲಿ ಉಂಟಾಗಿರುವ ಎಲ್ಪಿಜಿ ಗ್ಯಾಸ್ ಕೊರತೆ ಹೋಟೆಲ್ ಉದ್ಯಮಕ್ಕೆ ಮಾತ್ರ ಸೀಮಿತವಾಗದೇ, ಇದೀಗ ಆಟೋ ಚಾಲಕರ ಜೀವನೋಪಾಯಕ್ಕೂ ಭಾರೀ ಹೊಡೆತ ನೀಡುತ್ತಿದೆ. ಗ್ಯಾಸ್ ತುಂಬಿಸಲು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗಿರುವ ಪರಿಸ್ಥಿತಿಗೆ ಬೇಸತ್ತ ಚಾಲಕರು, ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹೆಬ್ಬಾಳದ ಸಂಜಯನಗರದಲ್ಲಿರುವ ಸಚಿವರ ನಿವಾಸದ ಎದುರು ಜಮಾಯಿಸಿದ ಆಟೋ ಚಾಲಕರು, “ಗ್ಯಾಸ್ ಕೊಡಿಸಲೇಬೇಕು” ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಹಲವೆಡೆ ಆಟೋಗಳಿಗೆ ಅಗತ್ಯವಿರುವ LPG ಗ್ಯಾಸ್ ಲಭ್ಯವಾಗದೆ, ದಿನನಿತ್ಯದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಚಾಲಕರು ಅಳಲು ತೋಡಿಕೊಂಡರು.
ಪ್ರತಿಭಟನಾಕಾರರ ಜೊತೆ ಮಾತನಾಡಿದ ಸಚಿವ ಮುನಿಯಪ್ಪ, ಕೇಂದ್ರ ಸರ್ಕಾರದಿಂದ ಪ್ರತಿದಿನ ಸುಮಾರು 3 ಸಾವಿರ ಸಿಲಿಂಡರ್ಗಳ ಪೂರೈಕೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿ, ಸರಬರಾಜಿನಲ್ಲಿ ವ್ಯತ್ಯಾಸ ಇಲ್ಲ ಎಂದು ಹೇಳಿದರು. ಆದರೆ ಕೆಲವು ಖಾಸಗಿ ಗ್ಯಾಸ್ ಬಂಕ್ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಬಂಕ್ ಮಾಲೀಕರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಆಟೋ ಚಾಲಕರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ಏಪ್ರಿಲ್ 10ರಂದು ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಇಂದು ಮಧ್ಯಾಹ್ನದ ನಂತರವೂ ಸಂಬಂಧಪಟ್ಟವರೊಂದಿಗೆ ಚರ್ಚೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟರು. ಸಮಸ್ಯೆ ತಕ್ಷಣ ಪರಿಹಾರವಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ವಿವಿಧ ಆಟೋ ಚಾಲಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇದರ ನಡುವೆ, ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಚಿವರು ತೆರಳುವ ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಜನಪ್ರತಿನಿಧಿಗಳ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.



