ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ಸಾಗಿದ್ದು, ಅಕ್ರಮ ಸಾರಾಯಿ ಸೇವನೆಯಿಂದ ಗ್ರಾಮದ 7ರಿಂದ 9 ವ್ಯಸನಿಗಳು ಸಾವನ್ನಪ್ಪಿದ್ದಾರೆ. ಈ ಕುರಿತು ಹಲವಾರು ಬಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಸಹ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಮಾಡಲಗೇರಿ ಗ್ರಾಮಸ್ಥರು ಗುರುವಾರ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಸುಮಾರು 9 ಜನ ಅಕ್ರಮ ಸಾರಾಯಿ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮದ ಯುವಕರು ದುಡಿದು ಬಂದ ಹಣವನ್ನು ಸಾರಾಯಿ ಕುಡಿತಕ್ಕೆ ಸುರಿಯುತ್ತಿದ್ದಾರೆ. ಇದರಿಂದ ಅನೇಕ ಸಂಸಾರಗಳು ಬೀದಿಗೆ ಬಂದಿದ್ದು, ಗ್ರಾಮದಲ್ಲಿಯೇ ಸಿಗುತ್ತಿರುವ ಮದ್ಯವನ್ನು ಸೇವಿಸಿ ಇಲ್ಲಿಯವರೆಗೆ 7ರಿಂದ 9 ಜನರು ಮೃತಪಟ್ಟಿದ್ದಾರೆ. ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದರು.
ಸಾರಾಯಿ ಸೇವನೆಯಿಂದ ಮಕ್ಕಳನ್ನು ಕಳೆದುಕೊಂಡಿರುವ ತಾಯಂದಿರು ಅಬಕಾರಿ ನಿರೀಕ್ಷಕರಾದ ಶ್ರೀದೇವಿ ಕೊಳ್ಳಿಯವರನ್ನು ತರಾಟೆಗೆ ತೆಗೆದುಕೊಂಡು ಕಣ್ಣೀರು ಹಾಕಿದರು. ಇಲಾಖೆಯ ಸಿಬ್ಬಂದಿಗಳೇ ಅಕ್ರಮ ಸಾರಾಯಿ ಮಾರಾಟದಲ್ಲಿ ನೇರವಾಗಿ ತೊಡಗಿಕೊಂಡಿದ್ದಾರೆ. ಅಲ್ಲದೆ ಮಾರಾಟಗಾರರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸಾರಾಯಿ ಮಾರಾಟ ಅಧಿಕವಾಗುತ್ತಿದ್ದು, ಇದಕ್ಕೆಲ್ಲ ನೀವೇ ಕಾರಣ ಎಂದು ಹರಿಹಾಯ್ದರು. ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಿಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಸಿಟ್ಟು ಅರಿತ ಪಿಎಸ್‌ಐ ಪ್ರಕಾಶ ಬಣಕಾರ ಮಧ್ಯ ಪ್ರವೇಶಿಸಿ, ಗ್ರಾಮದಲ್ಲಿ ಈ ರೀತಿ ನಡೆಯುತ್ತಿದೆ ಎಂದು ನಮ್ಮ ಗಮನಕ್ಕೆ ತಂದಿದೀರಿ, ಇನ್ನು ನಿಮಗೆ ಚಿಂತೆ ಬೇಡ. ಗ್ರಾಮದಲ್ಲಿ ನಡೆಯುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲಾಗುವುದು ಎನ್ನುತ್ತಿದ್ದಂತೆ ಪುನಃ ಆಕ್ರೋಶಗೊಂಡ ಮಹಿಳೆಯರು, ಈಗಾಗಲೇ ಹತ್ತಾರು ಬಾರಿ ಅಬಕಾರಿ ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಗ್ರಾಮಸ್ಥರನ್ನು ಕುರಿತು ಪಿಎಸ್‌ಐ ಪ್ರಕಾಶ ಬಣಕಾರ, ನಿಮ್ಮ ಆಕ್ರೋಶ ನಮಗೆ ಅರ್ಥವಾಗುತ್ತದೆ. ಅಕ್ರಮ ಸಾರಾಯಿ ಮಾರಾಟವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಮಾಧಾನಪಡಿಸಿದಾಗ, ಇದಕ್ಕೆ ಒಪ್ಪಿದ ಗ್ರಾಮಸ್ಥರು ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ರತ್ವವ್ವ ಮಂಡಸೊಪ್ಪಿ, ಯಲ್ಲಮ್ಮ ರಾಯನಗೌಡ್ರ, ಭೀಮವ್ವ ಭಾವಿ, ಶೇಖವ್ವ ಪಾಟೀಲ, ಶಿವಗಂಗವ್ವ ಭೀಮನಗೌಡ್ರ ಮುಂತಾದವರಿದ್ದರು.
“ಅಕ್ರಮ ಸಾರಾಯಿ ಮಾರಾಟದಿಂದ ಗ್ರಾಮದಲ್ಲಿ ನೆಮ್ಮದಿಯಿಲ್ಲ. ಸಂಜೆಯಾದರೆ ಮಹಿಳೆಯರು ಹೊರಗಡೆ ಬರುವಂತಿಲ್ಲ, ಮನೆಯ ಜವಾಬ್ದಾರಿಗಳನ್ನು ಹೊರಬೇಕಾದ ಮಕ್ಕಳು ಸಾರಾಯಿ ಚಟಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸ್ವತಃ ನಾನೇ ಮಗನನ್ನು ಕಳೆದುಕೊಂಡಿದ್ದೇನೆ. ಬೇರೆಯವರ ಮಕ್ಕಳೂ ಬಲಿಯಾಗಬಾರದೆಂದು ನನ್ನ ಹೋರಾಟ ಸಾಗಿದೆ. ಇನ್ನಾದರೂ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟವನ್ನು ನಿಲ್ಲಿಸಲಿ”
-
ಹನಮವ್ವ ಭೀಮನಗೌಡ್ರ.
ಮಾಡಲಗೇರಿ.
“ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟದಿಂದ ಈಗಾಗಲೇ 7ರಿಂದ 9 ಜನ ಸಾವನ್ನಪ್ಪಿದ್ದಾರೆ. ಈ ಕುರಿತು ಹಲವಾರು ಬಾರಿ ಇಲಾಖೆಯವರಿಗೆ ತಿಳಿಸಿದರು ಸಹ ಪ್ರಯೋಜನವಾಗುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ”
-
ಶಂಕರಗೌಡ ಭೀಮನಗೌಡ್ರ.
ಮಾಡಲಗೇರಿ.



