ಮಡಿಕೇರಿ:- ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನ ಹತ್ಯೆಗೈದಿದ್ದ ಆರೋಪಿಗೆ ವಿರಾಜಪೇಟೆ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಗಿರೀಶ್ ಎಂಬಾತನೇ ಗಲ್ಲು ಶಿಕ್ಷೆಗೆ ಒಳಗಾದ ಆರೋಪಿ. ಈತ ಕೇರಳ ಮೂಲದವ ಎನ್ನಲಾಗಿದೆ. ಕಳೆದ ವರ್ಷ 2024 ರಲ್ಲಿ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಕೊಳತೋಡು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೇರಳ ಮೂಲದ ಗಿರೀಶ್ (37) ಬರ್ಬರವಾಗಿ ಹತ್ಯೆ ಮಾಡಿದ್ದ. ಮೃತಪಟ್ಟವರನ್ನ ನಾಗಿ (35), ಆಕೆಯ ಮಗಳು ಕಾವೇರಿ (7) ಹಾಗೂ ನಾಗಿಯ ಅಜ್ಜ-ಅಜ್ಜಿ ಕರಿಯ (75) ಮತ್ತು ಗೌರಿ (70) ಎಂದು ಗುರುತಿಸಲಾಗಿತ್ತು. ಆರೋಪಿ ಗಿರೀಶ್ ಕತ್ತಿಯಿಂದ ನಾಲ್ವರನ್ನೂ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ.
ಪ್ರಕರಣದ ಭೀಕರತೆ ಮತ್ತು ಗಂಭೀರತೆಯನ್ನು ಮನಗಂಡ ಪೊನ್ನಂಪೇಟೆ ಠಾಣೆ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಆರೋಪಿ ಗಿರೀಶ್ನನ್ನ ಬಂಧಿಸಿದ್ದರು. ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಎಲ್ಲಾ ಸಾಕ್ಷ್ಯ ಮತ್ತು ವಾದ-ಪ್ರತಿವಾದ ಪರಿಶೀಲಿಸಿದ ಬಳಿಕ ವಿರಾಜಪೇಟೆ ಸೆಷನ್ಸ್ ನ್ಯಾಯಾಲಯವು, ಆರೋಪಿ ಗಿರೀಶ್ನ ಅಪರಾಧವು ಗಂಭೀರ ಸ್ವರೂಪದ್ದು ಎಂದು ಪರಿಗಣಿಸಿ, ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.



