ದಳಪತಿ ವಿಜಯ್ ಅಭಿನಯದ ‘ಜನನಾಯಗನ್’ ಸಿನಿಮಾದ ಬಿಡುಗಡೆಗೆ ಸಂಬಂಧಿಸಿದ ಸೆನ್ಸಾರ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಅಂತ್ಯ ಹಾಡಿದೆ. ಚಿತ್ರಕ್ಕೆ ಅಗತ್ಯ ಬದಲಾವಣೆಗಳ ಬಳಿಕ ಯುಎ ಪ್ರಮಾಣ ಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಚಿತ್ರದ ವಿರುದ್ಧ ಸಲ್ಲಿಸಲಾಗಿದ್ದ ದೂರುಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, “ಮೊದಲು ದೂರು ನೀಡಿ, ನಂತರ ಅದರ ಪರಿಣಾಮಗಳ ಬಗ್ಗೆ ಯೋಚಿಸುವುದು ಅಪಾಯಕಾರಿ ಪ್ರವೃತ್ತಿ. ಇಂತಹ ದೂರುಗಳಿಗೆ ಉತ್ತೇಜನ ನೀಡಬಾರದು” ಎಂದು ಸ್ಪಷ್ಟವಾಗಿ ಹೇಳಿದೆ. ಈ ಆದೇಶದಿಂದ ಸೆನ್ಸಾರ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದ ಚಿತ್ರತಂಡಕ್ಕೆ ಮಹತ್ವದ ರಿಲೀಫ್ ಸಿಕ್ಕಂತಾಗಿದೆ.
ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಜನವರಿ 9ರಂದು ‘ಜನನಾಯಗನ್’ ಸಿನಿಮಾ ಜಾಗತಿಕವಾಗಿ ಬಿಡುಗಡೆಯಾಗಬೇಕಿತ್ತು. ತಮಿಳು ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿರುವ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ವಿಜಯ್ ಕಟೌಟ್‌ಗಳು ಪ್ರದರ್ಶಿತವಾಗಿದ್ದರೂ, ಸೆನ್ಸಾರ್ ಮಂಡಳಿಯ ವಿಳಂಬದಿಂದ ಬಿಡುಗಡೆ ಮುಂದೂಡಲಾಗಿತ್ತು.
‘ಜನನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದು ವಿಜಯ್ ಈಗಾಗಲೇ ಮಲೇಷ್ಯಾದ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಇದರಿಂದ ಅಭಿಮಾನಿಗಳು ಈ ಸಿನಿಮಾದ ಮೇಲೆ ವಿಶೇಷ ನಿರೀಕ್ಷೆ ಇಟ್ಟುಕೊಂಡಿದ್ದರು. ಸೆನ್ಸಾರ್ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧವೂ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.
ವಿದೇಶಿ ಮಾರುಕಟ್ಟೆಯಲ್ಲಿಯೂ ‘ಜನನಾಯಗನ್’ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಬ್ರಿಟನ್‌ನಲ್ಲಿ 260ಕ್ಕೂ ಹೆಚ್ಚು ಶೋಗಳು ಫಿಕ್ಸ್ ಆಗಿದ್ದು, ಇದುವರೆಗೆ 65 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿರುವುದು ಸಿನಿಮಾದ ಮೇಲಿನ ಕ್ರೇಜ್‌ಗೆ ಸಾಕ್ಷಿಯಾಗಿದೆ.



