ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನ ವಿದೇಶಿ ವಲಸೆ ಪಕ್ಷಿಗಳ ತಾಣವಾಗಿರುವ ಮಾಗಡಿ ಗ್ರಾಮವು ಗ್ರಾಮ ಪಂಚಾಯಿತಿಯ ಕೇಂದ್ರಸ್ಥಾನವಾಗಿ ಗುರುತಿಸಿಕೊಂಡಿದೆ. ಹಲವು ಬಾರಿ ಗಾಂಧಿಗ್ರಾಮ ಪುರಸ್ಕಾರಕ್ಕೂ ಈ ಪಂಚಾಯಿತಿ ಭಾಜನವಾಗಿದೆ. ಆದಾಗ್ಯೂ ಗ್ರಾಮ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮರ್ಪಕ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ.
ಗ್ರಾ.ಪಂ ಕೇಂದ್ರಸ್ಥಾನ: ಮಾಗಡಿ ಗ್ರಾಮವು ಗ್ರಾಮ ಪಂಚಾಯಿತಿಯ ಕೇಂದ್ರಸ್ಥಾನವಾಗಿದ್ದು, ಮಾಗಡಿ, ಹೊಳಲಾಪೂರ, ಪರಸಾಪೂರ ಮತ್ತು ಚನ್ನಪಟ್ಟಣ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಸುಮಾರು 6969 ಜನಸಂಖ್ಯೆಯನ್ನು ಹೊಂದಿದ್ದು, 16 ಜನ ಸದಸ್ಯರ ಸಂಖ್ಯಾಬಲವನ್ನು ಹೊಂದಿದೆ.
ನರೇಗಾದಲ್ಲಿ 9 ಮನೆಗಳ ನಿರ್ಮಾಣ: ಗ್ರಾ.ಪಂ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 9 ಮನೆಗಳ ನಿರ್ಮಾಣ ಹೊರತುಪಡಿಸಿದರೆ ಉಳಿದಂತೆ ಯಾವ ಕೆಲಸಗಳೂ ನಡೆಯುತ್ತಿಲ್ಲ.
ಮಳೆಗಾಲವಿದ್ದುದರಿಂದ ಕೂಲಿ ಕಾರ್ಮಿಕರು ತಮ್ಮ ಜಮೀನುಗಳ ಕೆಲಸದಲ್ಲಿ ತೊಡಗಿರುತ್ತಾರೆ. ವಾರ್ಷಿಕ 25.80 ಲಕ್ಷ ರೂ ತೆರಿಗೆ ಸಂಗ್ರಹಣೆಯಲ್ಲಿ ಈಗಾಗಲೇ 5.60 ಲಕ್ಷ ರೂ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ.
ನರೇಗಾ ಯೋಜನೆಯು ಸಮರ್ಪಕವಾಗಿ ನಡೆಯಬೇಕು, ಕೂಲಿಕಾರ್ಮಿಕರಿಗೆ ಸಮರ್ಪಕವಾಗಿ ಕೂಲಿ ಕೆಲಸ ಸಿಗಬೇಕು, ಅವರ ವೇತನ ಸರಿಯಾಗಿ ಪಾವತಿಯಾಗಬೇಕೆಂದು ಸ್ವತಃ ಜಿ.ಪಂ ಸಿಇಓ ಭರತ್ ಎಸ್ ಅವರೇ ಗ್ರಾ.ಪಂ ಮಟ್ಟದಲ್ಲಿ ಭೇಟಿ ನೀಡಿ ಯೋಜನೆಯ ನಿರ್ವಹಣೆ ಪರಿಶೀಲಿಸುತ್ತಿದ್ದಾರೆ. ಆದರೆ ತಾಲೂಕಾ ಮಟ್ಟದಲ್ಲಿ ನರೇಗಾ ಯೋಜನೆಯಡಿ ಜಾಗೃತಿ ಮೂಡಿಸಬೇಕಾದ ಸಿಬ್ಬಂದಿಗಳು ಕಾಟಾಚಾರಕ್ಕೆಂಬಂತೆ ಗ್ರಾ.ಪಂ ವತಿಯಿಂದ ನಡೆಯುತ್ತಿರುವ ಕೆಲಸಗಳಲ್ಲಿ ಸೇರಿದ ಕೂಲಿಕಾರ್ಮಿಕರು ಇರುವ ಸ್ಥಳಕ್ಕೆ ಧಾವಿಸಿ ಜಾಗೃತಿ ಮೂಡಿಸುತ್ತಿರುವುದು ವಿಪರ್ಯಾಸ. ಇಂತಹ ಸಿಬ್ಬಂದಿಗಳಿಗೆ ಸಿಇಓ ಅವರು ಸೂಕ್ತ ನಿರ್ದೇಶನ ನೀಡಿ ಗ್ರಾಮ ಮಟ್ಟದಲ್ಲೂ ಸಹ ಈ ಬಗ್ಗೆ ವ್ಯಾಪಕ ಜಾಗೃತಿ ಆಗಬೇಕೆಂದು ಮಾಗಡಿ ಗ್ರಾ.ಪಂ ಸದಸ್ಯರು ಆಗ್ರಹಿಸುತ್ತಿದ್ದಾರೆ.
ಜಲಜೀವನ ಮಿಷನ್ ಅಪೂರ್ಣ: ಮಾಗಡಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಯೋಜನೆ ಅಪೂರ್ಣಗೊಂಡಿದ್ದು, 2 ಶುದ್ಧ ನೀರಿನ ಘಟಕಗಳು ಕಾರ್ಯಾರಂಭ ಮಾಡುತ್ತಿವೆ. ಡಿಬಿಓಟಿಯಿಂದ ನಿತ್ಯವೂ ಜನತೆಗೆ ನೀರು ಪೂರೈಕೆಯಾಗುತ್ತಿದೆ. ಗ್ರಾ.ಪಂ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಹೊಂದಿದೆ. ಇಲ್ಲಿ ಕಸವನ್ನು ಸಂಗ್ರಹಿಸುವುದಕ್ಕಾಗಿ ಮನೆ ಮನೆಗೆ ಗ್ರಾ.ಪಂ ವಾಹನ ತೆರಳಿದರೂ ಜನತೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲವೆಂದು ಪಂಚಾಯಿತಿಯ ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಮಾಗಡಿ ಕೆರೆ ಸುತ್ತಲೂ ಗಬ್ಬೆದ್ದು ನಾರುವ ದುರ್ವಾಸನೆ: ವಿದೇಶಿ ವಲಸೆ ಪಕ್ಷಿಗಳ ತಾಣವಾಗಿರುವ ಮಾಗಡಿ ಸಂರಕ್ಷಿತ ಕೆರೆಯ ಸುತ್ತಲೂ ಎಲ್ಲೆಂದರಲ್ಲಿ ಕಸದ ರಾಶಿ ರಾರಾಜಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವಂತಹ ದುರ್ವಾಸನೆ ಬೀರುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಾಗಡಿ ಗ್ರಾ.ಪಂ ಸದಸ್ಯ ಹಾಗೂ ತಾಲೂಕಾ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ, ಗ್ರಾಮದಲ್ಲಿ ಜೆಜೆಎಂ ಕೆಲಸ ಅಪೂರ್ಣಗೊಂಡಿದೆ, ಸಿಸಿ ರಸ್ತೆ, ಸಿಸಿ ಗಟಾರಗಳ ನಿರ್ಮಾಣಕ್ಕೆ ಅನುದಾನದ ಅವಶ್ಯಕತೆ ಇದೆ. ನರೇಗಾ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಸಿಬ್ಬಂದಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದರು.