ಬೆಂಗಳೂರು: ಸಚಿವ ಹೆಚ್.ಸಿ ಮಹದೇವಪ್ಪ ಬಹಳ ದೊಡ್ಡವರು. ಈಗ ಅವರೂ ನಮ್ಮ ಹೈಕಮಾಂಡ್ ಭಾಗವಾಗಿದ್ದಾರೆ. ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಈ ಬಗ್ಗೆ ಪಕ್ಷವೇ ತೀರ್ಮಾನ ಮಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬಳ್ಳಾರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಸಚಿವ ಹೆಚ್.ಸಿ ಮಹದೇವಪ್ಪ ಅವರು ಅಧಿಕಾರ ಹಂಚಿಕೆ ವಿಚಾರವಾಗಿ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, “ನಾಯಕರ ಹೇಳಿಗೆ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ಳುತ್ತಾರೆ. ನಾನು ಮಹದೇವಪ್ಪನಿಗೆ ಹಾಗೂ ಬೇರೆಯವರಿಗೆ ಉತ್ತರ ನೀಡಲು ತಯಾರಿಲ್ಲ.
ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆ ನಾನು, ಸಿದ್ದರಾಮಯ್ಯನವರು ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ. ಈ ತೀರ್ಮಾನ ಏನು ಎಂಬುದು ಸಮಯ ಬಂದಾಗ ತಿಳಿಯುತ್ತದೆ. ಇದು ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟು ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯದ ಜನಕ್ಕೆ ಸಂದೇಶ ನೀಡುತ್ತಾರೆ” ಎಂದು ತಿಳಿಸಿದರು.
ನನಗೆ ಶಾಸಕರ ವಿದೇಶ ಪ್ರವಾಸ ಗೊತ್ತಿಲ್ಲ
ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಿದಾಗ, “ನನಗೆ ಯಾವ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ನನಗೆ ಮಾಧ್ಯಮಗಳಿಂದಷ್ಟೇ ತಿಳಿದಿದೆ. ಇದು ಅವರ ವೈಯಕ್ತಿಕ ಪ್ರವಾಸವೋ, ಬೇರೆಯವರು ಅವರನ್ನು ಪ್ರವಾಸಕ್ಕೆ ಕಳುಹಿಸುತ್ತಿದ್ದಾರೋ ಗೊತ್ತಿಲ್ಲ. ಇದು ಪ್ರವಾಸ ಕಳುಹಿಸುತ್ತಿರುವವರು ಉಂಟು ಹಾಗೂ ಪ್ರವಾಸ ಹೋಗುತ್ತಿರುವವರು ಉಂಟು. ಪಕ್ಷದ ಅಧ್ಯಕ್ಷನಾಗಿ ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ತಿಳಿಸಿದರು.



