ಪ್ರಯಾಗರಾಜ್: ಪ್ರಧಾನಿ ನರೇಂದ್ರ ಮೋದಿ ಇಂದು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರುದ್ರಾಕ್ಷಿ ಮಾಲೆ ಹಿಡಿದು ಸೂರ್ಯನಿಗೆ ನಮಸ್ಕಾರ ಮಾಡಿ ಅರ್ಘ್ಯ ಅರ್ಪಿಸಿ ಮಂತ್ರೋಚ್ಛಾರಣೆ ಮಾಡಿ ಮೂರು ಬಾರಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದರು.
ಇವರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಕಿರಣ್ ರಿಜಿಜು, ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ಕೂಡ ಪವಿತ್ರ ಸ್ನಾನ ಮಾಡಿದ್ದಾರೆ. ಇದಲ್ಲದೆ ಅನೇಕ ದೇಶಗಳ ಪ್ರತಿನಿಧಿಗಳು ಕೂಡ ಆಗಮಿಸಿದ್ದರು.
ಜನವರಿ 13 ರಂದು ಪ್ರಾರಂಭವಾದ ಮಹಾಕುಂಭದಲ್ಲಿ ಇಲ್ಲಿಯವರೆಗೆ 14 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾದ ಮಹಾಕುಂಭವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆಯಾಗಿದ್ದು, ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತಿದೆ. ಇದು ಫೆಬ್ರವರಿ 26 ರಂದು ಮಹಾಶಿವರಾತ್ರಿಯವರೆಗೆ ಮುಂದುವರಿಯುತ್ತದೆ.