ಬೆಂಗಳೂರು:– ರಾಜಧಾನಿ ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದ ಮಹಾಲಕ್ಷ್ಮಿ ಕೊಲೆ ಪ್ರಕರಣದ ತನಿಖೆ ಚುರುಕು ಪಡೆದಿದೆ. ಈ ನಡುವೆಯೇ ಪ್ರಕರಣ ಶಂಕಿತ ಆರೋಪಿ ಒಡಿಶಾದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಮಹಾಲಕ್ಷ್ಮೀ ಕೊಲೆ ಬಳಿಕ ಮೃತ ಮುಕ್ತಿ ರಂಜನ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈಗಾಗಲೇ ಬೆಂಗಳೂರು ಪೊಲೀಸರು ವಿಚಾರಣೆಗೆ ಒಡಿಶಾಗೆ ತೆರಳಿದ್ದಾರೆ.
ಮಹಾಲಕ್ಷ್ಮೀ ಕೊಲೆ ಕೇಸ್ನಲ್ಲಿ ಸಾಕಷ್ಟು ಜನರ ಹೆಸರು ತಳುಕು ಹಾಕಿಕೊಂಡಿತ್ತು. ಸುಂದರಿ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಎದುರಾಗಿತ್ತು. ಹಂತಕ ಯಾರು ಅನ್ನೋದು ಪತ್ತೆ ಹಚ್ಚುವುದೇ ಸವಾಲಾಗಿತ್ತು. ನಿರಂತರ ತನಿಖೆ ಬಳಿಕ ಹಂತಕನ ಸುಳಿವು ಪೊಲೀಸರಿಗೆ ಸಿಕ್ಕಿತ್ತು.
ಇಷ್ಟಕ್ಕೂ ಮಹಾಲಕ್ಷ್ಮೀ ಮಲ್ಲೇಶ್ವರಂನಲ್ಲಿರುವ ಫ್ಯಾಷನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಅನ್ನೋನು ಇಲ್ಲಿ ಟೀಮ್ ಹೆಡ್ ಆಗಿದ್ದ. ಮಹಾಲಕ್ಷ್ಮೀ ಬ್ಯೂಟಿಗೆ ಮನಸೋತಿದ್ದ. ಇಬ್ಬರ ನಡುವೆ ಸಲುಗೆ ಬೆಳೆದಿತ್ತು.
ಸೆಪ್ಟೆಂಬರ್ 1 ರಂದು ಕೆಲಸಕ್ಕೆ ಬಂದಿದು, ಮಾರನೇ ದಿನ ಒಟ್ಟಿಗೆ ವೀಕ್ಲಿ ಆಫ್ ತಗೊಂಡಿದ್ದರು. ತನ್ನ ತಾಯಿಗೆ ಫೋನ್ ಮಾಡಿದ್ದ ಮಹಾಲಕ್ಷ್ಮೀ, ಅಮ್ಮ ಮನೆಗೆ ಬರ್ತೀನಿ ಅಂತ ಹೇಳಿದ್ದಳು. ಬಳಿಕ ಅದೇನ್ ಆಯ್ತೋ ಏನೋ.. ಹಂತಕ ಮುಕ್ತಿ ರಂಜನ್ ರಾಯ್ ತನ್ನ ಗೆಳತಿ ಮಹಾಲಕ್ಷ್ಮೀಯನ್ನ ಬರ್ಬರವಾಗಿ ಕೊಲೆ ಮಾಡಿದ್ದ. ಮೃತದೇಹವನ್ನ 50ಕ್ಕೂ ಹೆಚ್ಚು ಪೀಸ್ ಮಾಡಿ, ಫ್ರೀಡ್ಜ್ಗೆ ತುಂಬಿಸಿ ತನ್ನೂರಿಗೆ ಎಸ್ಕೇಪ್ ಆಗಿದ್ದ.
ವಿಪರ್ಯಾಸ ಅಂದರೆ ಬೆಂಗಳೂರಿನಲ್ಲಿ ಮಹಾಲಕ್ಷ್ಮೀಯನ್ನ ಕೊಂದು ಒಡಿಶಾಗೆ ಎಸ್ಕೇಪ್ ಆಗಿದ್ದ ಆರೋಪಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರು ತನ್ನ ಜನ್ಮ ಜಾಲಾಡುತ್ತಿದ್ದಾರೆ ಎಂಬ ವಿಷಯ ತಿಳಿದು ನೇಣಿಗೆ ಕೊರಳೊಡ್ಡಿದ್ದಾನೆ. ಆರೋಪಿಯ ಬೆನ್ನು ಬಿದ್ದಿದ್ದ ವೈಯಾಲಿಕಾವಲ್ ಪೊಲೀಸರಿಗೆ ಒಡಿಶಾದಲ್ಲಿ ವಿಷಯ ಗೊತ್ತಾಗಿದೆ.
ಸದ್ಯ ಇಲ್ಲಿ ಕೊಲೆಗೆ ಕಾರಣ ತಿಳಿಸಬೇಕಿದ್ದ ಕೊಲೆಗಾರನೂ ಸಾವಿನ ಕದ ತಟ್ಟಿದ್ದಾನೆ.