ಮುಂಬೈ:- ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಭೀಕರವಾಗಿ ಪತನಗೊಂಡಿದೆ.
ಈ ದುರ್ಘಟನೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮೂಲಗಳು ದೃಢಪಡಿಸಿವೆ. ಘಟನೆ ನಡೆದ ತಕ್ಷಣವೇ ರಕ್ಷಣಾ ಹಾಗೂ ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ ತುರ್ತು ಭೂಸ್ಪರ್ಶ (ಎಮರ್ಜೆನ್ಸಿ ಲ್ಯಾಂಡಿಂಗ್) ಮಾಡಲು ಪ್ರಯತ್ನಿಸುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಜಿತ್ ಪವಾರ್ ಅವರು ಬಾರಾಮತಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ವಿಮಾನ ಪತನಕ್ಕೆ ತಾಂತ್ರಿಕ ದೋಷ ಅಥವಾ ಇಳಿಯುವ ವೇಳೆ ಉಂಟಾದ ಅಡಚಣೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸುದ್ದಿಯಿಂದ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ತೀವ್ರ ಆಘಾತ ಉಂಟಾಗಿದ್ದು, ಸುದೀರ್ಘ ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ವ್ಯಾಪಕ ಸಂತಾಪ ವ್ಯಕ್ತವಾಗುತ್ತಿದೆ.



