ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜದ ಬೆಳಕೇ ಆಗಿದ್ದ ಮಹಾತ್ಮರ ಆದರ್ಶ, ಮೌಲ್ಯ, ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಅವರು ಸಮೀಪದ ಹೂವಿನಶಿಗ್ಲಿ ಗ್ರಾಮದ ವಿರಕ್ತಮಠದ ಲಿಂ.ನಿರಂಜನ ಮಹಾಸ್ವಾಮಿಗಳ 16ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆಸಿದ `ಮಹಾತ್ಮರ ಬದುಕು-ಬೆಳಕು’ ಚಿಂತನಗೋಷ್ಠಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾತ್ಮರ ದಿವ್ಯ ಜ್ಞಾನ, ಅನುಭವ ಮತ್ತು ಸತ್ಸಂಗದಿಂದ ಸುಂದರ ಬದುಕು ಸಾಧ್ಯವಾಗುತ್ತದೆ. ಲಿಂ.ನಿರಂಜನ ಮಹಾಸ್ವಾಮಿಗಳಂತಹ ಮಹಾತ್ಮರ ಬದುಕು ನಮಗೆಲ್ಲ ದಾರಿದೀಪವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈಗಿನ ಶ್ರೀಗಳು ಗುರುಕುಲದ ನೂರಾರು ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಶ್ರೀಮಠದ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಕುಂದಗೋಳ ಶ್ರೀ ಅಭಿನವ ಬಸವಣ್ಣಜ್ಜನವರು, ನವಲಗುಂದದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಗುಡ್ಡದ ಆನ್ವೇರಿ ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಗಳು, ಹಿರೇಮಲ್ಲನಕೇರಿಯ ಚನ್ನಬಸವ ಮಹಾಸ್ವಾಮಿಗಳು, ಕಮಡೊಳ್ಳಿಯ ಶ್ರೀ ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಮುಖಂಡರುಗಳಾದ ಗವಿಸಿದ್ದಪ್ಪ ದ್ಯಾಮಣ್ಣವರ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಶಿವಪುತ್ರಪ್ಪ ಕಲಕೋಟಿ, ಬಸವರಾಜ ಕೋಳಿವಾಡ, ಬಸವರಾಜ ಗಾಂಜಿ, ಪುಲಕೇಶಿ ಉಪನಾಳ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಬಸವೇಶ ಮಹಾಂತಶೆಟ್ಟರ, ನಾಯಿಕೆರೂರು ಗ್ರಾಮದ ಸದ್ಭಕ್ತರು ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಈಶ್ವರ ಮೆಡ್ಲೇರಿ ನಿರೂಪಿಸಿದರು. ಕೆ.ಎಸ್. ಇಟಗಿಮಠ, ರೇಣುಕಗೌಡ ಪಾಟೀಲ, ಶಿವಾನಂದ ಕಟ್ಟಿಮನಿ, ಶರಸೂರಿ, ಮಹಾದೇವ ಬಿಷ್ಟಣ್ಣವರ ನಿರ್ವಹಿಸಿದರು.
ನೇತೃತ್ವ ವಹಿಸಿದ್ದ ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯನ ಜನ್ಮ ದೇವರು ಕೊಟ್ಟ ಭಾಗ್ಯ ಮತ್ತು ಸತ್ಕಾರ್ಯ ಮಾಡಲೊಂದು ಅವಕಾಶ. ನಿತ್ಯ ಜೀವನದ ಹೋರಾಟ, ಜಂಜಾಟಗಳ ನಡುವೆಯೂ ಕೈಲಾದ ಮಟ್ಟಿಗೆ ಧರ್ಮ, ಶಿಕ್ಷಣ, ಸಾಮಾಜಿಕ ಸೇವೆ ಮಾಡಬೇಕು ಎಂಬುದು ಲಿಂ. ಶ್ರೀಗಳ ಇಚ್ಛೆಯಾಗಿತ್ತು. ಶ್ರೀಮಠದಲ್ಲಿ ನಿತ್ಯ ನೂರಾರು ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಸೇವೆ ನಡೆಸುವುದಕ್ಕೆ ಭಕ್ತರು ನೀಡುತ್ತಿರುವ ಸಹಕಾರ ಅಪಾರವಾಗಿದೆ. ಲಕ್ಷ್ಮೇಶ್ವರದಲ್ಲಿ ಶ್ರೀಮಠದ ಧಾರ್ಮಿಕ ಪಾಠಶಾಲೆ ನಿರ್ಮಿಸಲಾಗುತ್ತಿದ್ದು, ಭಕ್ತರು ಕೈಜೋಡಿಸುವಂತೆ ತಿಳಿಸಿದರು.



