ವಿಜಯಸಾಕ್ಷಿ ಸುದ್ದಿ, ಗದಗ: ಮಹಾಯೋಗಿ ವೇಮನರು 15ನೇ ಶತಮಾನದಲ್ಲಿ ಶ್ರೀಮಂತ ಕುಟುಂಬದಲ್ಲಿ ಜನ್ಮ ತಳೆದು, ಯೌವ್ವನದಲ್ಲಿ ಶ್ರೀಮಂತಿಕೆಯ, ಸ್ವೇಚ್ಛಾಚಾರದ ಜೀವನ ನಡೆಸಿದವರು. ನಂತರ ಜ್ಞಾನೋದಯವಾಗಿ ದಾರ್ಶನಿಕ ಕವಿ, ಮಹಯೋಗಿಯಾಗಿ ರೂಪುಗೊಂಡವರು. ವೇಮನರು ತಮ್ಮ ವಚನಗಳಿಂದ ಆಧ್ಯಾತ್ಮ ಅನುಭವವನ್ನು ಲೋಕಕ್ಕೆ ಹರಡಿದ್ದರು. ಅವರ ವಚನಗಳು ಇಂದಿಗೂ ಮನುಕುಲಕ್ಕೆ ಮಾದರಿಯಾಗಿವೆ. ಸ್ವೇಚ್ಛೆಯ ಜೀವನ ನಡೆಸುವವ ಪರಿವರ್ತನೆಯಿಂದ ಮಹಾ ಪುರುಷನಾಗಬಲ್ಲ ಎಂಬುದಕ್ಕೆ ಮಹಾಯೋಗಿ ವೇಮನ ಅವರ ಜೀವನ ಮಾದರಿಯಾಗಿದೆ ಎಂದು ಗದಗ-ಬೆಟಗೇರಿ ನಗರಸಭೆಯ ಕಾರ್ಯಾಲಯ ವ್ಯವಸ್ಥಾಪಕ ಪರುಶುರಾಮ ಶೇರಖಾನೆ ನುಡಿದರು.
ಅವರು ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನರ 613ನೇ ಜಯಂತಿ ಕಾರ್ಯಕ್ರಮದಲ್ಲಿ ಪೌರಾಯುಕ್ತರ ಸಂದೇಶದೊಂದಿಗೆ ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಹಿರಿಯ ಸಿಬ್ಬಂದಿ ಎ.ಎನ್. ಪುಣೇಕರ ಮಾತನಾಡಿ, ಯೋಗಿ ವೇಮನರು ಕೇವಲ ಮೂರು ಸಾಲುಗಳ ಕಾವ್ಯದ ಮೂಲಕ ಬಾಳಿನ ಸಾರವನ್ನೆಲ್ಲ ಜನರ ಆಡು ಮಾತಿನಲ್ಲಿ ರಚಿಸಿ, ಜನರ ಬಾಳನ್ನು ಚಿರಂತನ ಸ್ಥಾಯಿ ಮೌಲ್ಯದತ್ತ ತಿರುಗಿಸಲು ಪ್ರಯತ್ನಿಸಿದ್ದರು ಎಂದು ನುಡಿದರು.
ಸಮಾರಂಭದಲ್ಲಿ ಎಂ.ಆರ್. ಅನಂತಮೂರ್ತಿಯವರ ಪಾಟೀಲ್, ಎಸ್.ಎನ್. ಸೊಲ್ಲಾಪಟ್ಟಿ, ಡಿ.ಎಚ್. ಸೀತಿಮನಿ, ರೇಣುಕಾ ಭಾಟ, ರಾಜು ಕೆ.ಕಾಗನೂರ, ಮುಜಾವರ, ಜಗದೀಶ್ ಕೋನರಡ್ಡಿ ಮುಂತಾದವರು ಉಪಸ್ಥಿತರಿದ್ದರು.