ಬದುಕಿನ ಸಾರ-ಸತ್ವವನ್ನು ಅರಿತುಕೊಂಡು ಮುಂಬರುವ ಪೀಳಿಗೆಗೆ ಅನುಭವದ ಅಮೃತವನ್ನು ನೀಡುವ ಮೂಲಕ ಬದುಕಿನ ವಾಸ್ತವಿಕತೆ ಮೇಲೆ ಬೆಳಕು ಚೆಲ್ಲಿದವರು ಶರಣರು, ಸಂತರು, ಸಾಧುಗಳು, ದಾರ್ಶನಿಕರು, ತತ್ವಜ್ಞಾನಿಗಳು ಹಾಗೂ ಸಮಾಜ ಸುಧಾರಕರಾಗಿದ್ದಾರೆ. ಒಂದು ದಿನ ಮುಗಿದುಹೋಗುವ ಈ ಜೀವನದ ಪಯಣದಲ್ಲಿ ಕಷ್ಟ-ಸುಖ, ನೋವು-ನಲಿವು, ಸಂಘರ್ಷ ಹೋರಾಟ, ಅದೆಷ್ಟೋ ಏರಿಳಿತಗಳನ್ನು ಅನುಭವಿಸಿದ ಮಹನೀಯರು ತಾವು ಕಂಡುಂಡ ಅನುಭವಗಳನ್ನು ಆಧರಿಸಿ ಸಮಾಜಕ್ಕೊಂದು ಮೌಲ್ಯಯುತ ಸಂದೇಶವನ್ನು ಸಾರಿ ಹೋಗಿದ್ದಾರೆ. ಅಂತಹ ಮಹನೀಯರ ಸಾಲಿನಲ್ಲಿ ನಿಲ್ಲುವ ವೇಮನರು ತುಂಬು ವಿಶೇಷವೆನಿಸುತ್ತಾರೆ. ಕಾರಣ, ವಿಷಯಾಸಕ್ತರಾಗಿ ಭೋಗಜೀವನದ ದಾಸರಾಗಿ ಕೊನೆಗೊಂದು ದಿನ ವೈರಾಗ್ಯವನ್ನು ತಾಳಿ, ಇಡೀ ಮಾನವ ಸಂಕುಲಕ್ಕೆ ಬದುಕಿನ ನಶ್ವರತೆಯನ್ನು ತಿಳಿಸುತ್ತಾ ವಾಸ್ತವಿಕತೆಯ ಬೆಳಕನ್ನು ಪರಿಚಯಿಸಿದ್ದಾರೆ.
15ನೇ ಶತಮಾನದಲ್ಲಿ ತೆಲುಗು ನಾಡಿನ(ಆಂಧ್ರ ಪ್ರದೇಶ್) ಶ್ರೇಷ್ಠ ಸಂತರಾಗಿ, ಕವಿಗಳಾಗಿ, ಪರಮಜ್ಞಾನಿಗಳಾಗಿ, ಮಹಾಕವಿ ವೇಮನರು ಮಾನವನನ್ನು ಮಾನವನ ನಾಗಿಸಲು ಅವನಲ್ಲಿಯ ಜನ್ಮಜನ್ಮಾಂತರವಾಗಿ ಅಂಟಿಕೊಂಡಿರುವ ಕೆಲವೊಂದಿಷ್ಟು ಅತಿರೇಕದ, ಹಿತಮಿತವಿಲ್ಲದ ವರ್ತನೆಗಳು ವ್ಯಕ್ತಿಗೆ ಹಾಗೂ ಸಮಾಜಕ್ಕೆ ಮಾರಕವಾಗಬಲ್ಲವು ಎನ್ನುವ ಅಂಶವನ್ನು ಭಾರತೀಯ ಋಷಿಪರಂಪರೆಯ ವ್ಯಕ್ತ ರೂಪವಾದ ವೇಮನರು ನಿಜ ಜೀವನದ ದರ್ಶನವನ್ನು ತೋರಿದ್ದಾರೆ.
ರೆಡ್ಡಿ ಅರಸು ಮನೆತನದ ಕುಡಿಯಾಗಿ ಕುಮಾರಗಿರಿ ರೆಡ್ಡಿ ಮತ್ತು ಕೂತೂರು ಮಲ್ಲಮ್ಮ ದಂಪತಿಗಳ 5ನೇ ಮಗನಾಗಿ ಜನಿಸಿದ ವೇಮನರು ಎರಡು ವರ್ಷದ ಹಸುಳೆ ಇರುವಾಗ ರೆಡ್ಡಿ ಅರಸು ಮನೆತನಗಳಲ್ಲಿ ದಾಯಾದಿಗಳ ಕಲಹ ತೀವ್ರವಾಗಿತ್ತು. ಇಂತಹ ಹತ್ತು ಹಲವು ವ್ಯತಿರಿಕ್ತ ಸನ್ನಿವೇಶದಲ್ಲಿ ಬೆಳೆದ ವೇಮನರು ಹೆತ್ತವರಿಂದ ಹಾಗೂ ಒಡಹುಟ್ಟಿದವರಿಂದ ಸಂಬಂಧಿಕರಿಂದ ಅಲಕ್ಷ್ಯಕ್ಕೆ ಒಳಗಾದರು. ಇಂತಹ ಸಂದರ್ಭದಲ್ಲಿ ಅಣ್ಣನ ಹೆಂಡತಿಯಾದ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನವರ ಆಶ್ರಯದಲ್ಲಿ ಮಗನಂತೆ ಬೆಳೆಯಲಾರಂಭಿಸಿದರು.
ಹೆತ್ತ ತಾಯಿಯಂತೆ ಮಮತೆ ಪ್ರೀತಿ ವಾತ್ಸಲ್ಯ ತೋರಿದ ಹೇಮರೆಡ್ಡಿ ಮಲ್ಲಮ್ಮ ಲೌಕಿಕ ತುಮುಲಗಳಿಗೆ ಅಂಟಿಕೊಂಡಿದ್ದ ವೇಮನನಿಗೆ ತಾಯಿಯಾಗಿ ಆಧ್ಯಾತ್ಮ ಗುರುವಾಗಿ ಮಾರ್ಗ ತೋರಿದ ಮಹಾತಾಯಿ ಮಲ್ಲಮ್ಮ. ಆಂಧ್ರಪ್ರದೇಶದ ಶ್ರೀಶೈಲ ಪ್ರದೇಶವನ್ನಾಳಿದ ಕೊಂಡವೀಡು ರಾಜವಂಶದ ಸೊಸೆಯಾದ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಮಾನಸ ಪುತ್ರಿ. ಶಿವಶರಣೆ ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನನ್ನು ತನ್ನ ಪತಿಯೆಂದು ಭಾವಿಸಿದರೆ ಹೇಮರೆಡ್ಡಿ ಮಲ್ಲಮ್ಮ ಮಲ್ಲಿಕಾರ್ಜುನ ಸ್ವಾಮಿಯನ್ನು ತನ್ನ ತಂದೆಯೆಂದು ನಂಬಿ ಆಧ್ಯಾತ್ಮ ಸಾಧನೆಯ ಹಾದಿಯನ್ನು ತೋರಿದರು. ಮಲ್ಲಮ್ಮ ಸ್ತ್ರೀ ಕುಲಕ್ಕೆ ಆದರ್ಶ ರತ್ನವಾಗಿದ್ದಾರೆ. ಇಂತಹ ಮಹಾಸಾಧ್ವಿಯನ್ನು ಅತ್ತಿಗೆಯನ್ನಾಗಿ ಪಡೆದ ವೇಮನರ ಬದುಕಿನಲ್ಲಿ ಮಹಾ ಯೋಗಿಯಾಗುವ ಸಾಕ್ಷಾತ್ಕಾರದ ಹಾದಿಗೆ ಮೂಲ ಪ್ರೇರಣೆಯೇ ಹೇಮರೆಡ್ಡಿ ಮಲ್ಲಮ್ಮನವರಾಗಿದ್ದಾರೆ.
ಇಡೀ ರೆಡ್ಡಿ ಕುಲದ ಆರಾಧ್ಯ ದೈವವಾಗಿ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ತಮ್ಮ ಬದುಕಿನ ದರ್ಶನದಿಂದ ಇಡೀ ಮಾನವ ಕುಲ ಕೋಟಿಗೆ ಮನುಷ್ಯ ಜೀವನದ ಆದರ್ಶಗಳನ್ನು ತತ್ವಗಳನ್ನು ಸಂದೇಶಗಳನ್ನು ವಾಸ್ತವ ಸಂಗತಿಗಳನ್ನು ತಿಳಿಯಪಡಿಸಿದ್ದಾರೆ. ಹೇಮರೆಡ್ಡಿ ಮಲ್ಲಮ್ಮನ ಚರಿತ್ರೆ ರೋಮಾಂಚನಕಾರಿಯಾದ ಬದುಕಿನ ತಿರುವನ್ನು ಪ್ರತಿಯೊಬ್ಬರಲ್ಲಿ ಮೂಡಿಸುತ್ತದೆ. ಜೀವನದಲ್ಲಿ ಬರುವ ಕಷ್ಟ-ಸುಖ ನೋವು-ನಲಿವು ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ಭಕ್ತಿ ಭಾವಗಳ ಆಪ್ತತೆಯೊಂದಿಗೆ ಮಹಾಸಾಧ್ವಿ ಎನಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮ ಮಹಾಯೋಗಿ ವೇಮನರಿಗೆ ವಾತ್ಸಲ್ಯ ಕರುಣೆ ಮಮತೆಯಲ್ಲಿ ಬೆಳೆಸಿದರು ಕೂಡ ಆಸೆ ಆಮಿಷಗಳ ವಿಷಯಂಗಳಿಗೆ ಮನಸೋತು ದುಶ್ಚಟಗಳ ದಾಸನಾಗಿ ವೇಶ್ಯೆಯೊಬ್ಬಳ ಸಹವಾಸವನ್ನು ಮಾಡಿ ಮನೆಯ ಸಂಪತ್ತನ್ನೆಲ್ಲ ಹಾಳು ಮಾಡುವುದರ ಜೊತೆಗೆ ಮನೆಯ ಘನತೆ-ಗೌರವಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದ್ದ ರೀತಿ ಇದೆಲ್ಲವನ್ನೂ ನೋಡಿದ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಹೇಗಾದರೂ ಮಾಡಿ ಮೈದುನನ ಮನ ಪರಿವರ್ತಿಸಿ ಒಳ್ಳೆಯ ಮಾರ್ಗವನ್ನು ತೋರಬೇಕು ಎನ್ನುವ ವಿಚಾರ ಮಾಡುತ್ತಾರೆ.
ನಾವು ಚರಿತ್ರೆಯಲ್ಲಿ ಕೇಳಿದ ಸಂಗತಿಯಂತೆ ಸ್ತ್ರೀಯ ದಾಸನಾದ ವೇಮನ ಅವಳ ಮನದಾಸೆ ಈಡೇರಿಸಲು ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಕೇಳುತ್ತಾನೆ. ಆಗ ಒಂದು ಕರಾರನ್ನು ವಿಧಿಸುವ ಮೂಲಕ ಹೇಮರೆಡ್ಡಿ ಮಲ್ಲಮ್ಮ ಮೂಗುತಿಯನ್ನು ಕೊಡಲು ಒಪ್ಪುತ್ತಾಳೆ. ನಂತರ ಮೂಗುತಿಯನ್ನು ತೆಗೆದುಕೊಂಡು ಹೋದ ವೇಮನರು ಮೂಗುತಿ ಕೊಡುವಾಗ ಕರಾರಿನಂತೆ ನಗ್ನ ಸ್ತ್ರೀಯ ದೇಹವನ್ನು ತದೇಕಚಿತ್ತದಿಂದ ನೋಡಿದಾಗ ಜೀವನದಲ್ಲಿ ಏನೋ ಒಂದು ತರಹ ಅಸಹ್ಯದ ಭಾವನೆ ಆವರಿಸಿ ಜಿಗುಪ್ಸೆಗೊಂಡು, ನಶ್ವರ ಶರೀರದ ಮೇಲಿನ ವ್ಯಾಮೋಹ ಕಳಚಿ ಆಸೆ-ಆಮಿಷಗಳನ್ನು ಕಿತ್ತೊಗೆದು, ಮನಪರಿವರ್ತನೆಗೊಂಡು ಮಹಾಯೋಗಿಯಾದ ದೃಷ್ಟಾಂತ ವೇಮನರ ಬದುಕಿನಲ್ಲಿ ಮಹಾತಿರುವನ್ನು ನೀಡಿದ ಘಟನೆಯದು.
ಅವರ ಸಾಹಿತ್ಯ ಸರಿಯಾದ ರೀತಿಯಲ್ಲಿ ದಾಖಲಾಗಲಿಲ್ಲ. ನಂತರ ಕೆಲವು ತಾಳೆಗರಿಯ ಮೇಲೆ ಬರೆಯಲ್ಪಟ್ಟವು. ಬ್ರಿಟಿಷ್ ಅಧಿಕಾರಿ ಅವುಗಳನ್ನು ಗ್ರಂಥರೂಪದಲ್ಲಿ ಪ್ರಕಟಿಸುವ ಕಾರ್ಯ ಪ್ರಾರಂಭಿಸಿದ ನಂತರ, ವೇಮನರ ಸಾಹಿತ್ಯವು 20ನೇ ಶತಮಾನದಲ್ಲಿ ಕನ್ನಡ ಭಾಷೆಗೆ ಕೆಲವು ಪದ್ಯಗಳು ತರ್ಜುಮೆಯಾದವು. ನಂತರದಲ್ಲಿ ಹಲವು ಮಹನೀಯರ ಸಂಗ್ರಹಿಸಿ ಅನಂತರ ಡಾ.ಫ.ಗು ಹಳಕಟ್ಟಿಯವರು ಕೆಲವು ಮಹತ್ವದ ವೇಮನರ ಪದ್ಯಗಳನ್ನು ಆಯ್ದುಕೊಂಡು `ವೇಮಣ್ಣ ಯೋಗಿಯ ವಚನಗಳು’ ಎಂಬ ಗ್ರಂಥವನ್ನು ಪ್ರಕಟಿಸಿದರು.
ಮಹಾಯೋಗಿ ವೇಮನರ ತತ್ವ-ಸಿದ್ಧಾಂತಗಳು ಇಡೀ ಮಾನವ ಕಲ್ಯಾಣಕ್ಕೆ ಪೂರಕವಾದವುಗಳು, ಸರ್ವಜನ ಸಮುದಾಯಕ್ಕೆ ತಲುಪುವಂತಾಗಲು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ `ಮಹಾಯೋಗಿ ವೇಮನ ಪೀಠ’ವನ್ನು ಸ್ಥಾಪಿಸಲಾಯಿತು. ಹೀಗೆ ವೇಮನರ ವಿಚಾರಗಳು ಲೌಕಿಕ ಜೀವನದ ನಶ್ವರತೆಯನ್ನು ತಿಳಿಸುತ್ತಾ ಅಲೌಕಿಕ ಮಾರ್ಗದ ಸಾರ್ಥಕ ಹಾದಿಯನ್ನು ತೋರುತ್ತ ಶರಣರ ತತ್ವ ಚಿಂತನೆ ಪರಂಪರೆಯನ್ನು ಮಹಾಯೋಗಿ ವೇಮನರ ಕಾವ್ಯ ಸೃಷ್ಟಿಯಲ್ಲಿ ನಾವೆಲ್ಲ ಕಾಣಬಹುದು. ಆಸೆ-ಆಮಿಷಗಳಿಗೆ ಒಳಪಟ್ಟು ಭೋಗಿ ಯಾದ ವೇಮನರು ಮಹಾ ಯೋಗಿಯಾಗಿ ತ್ಯಾಗಜೀವನದ ಸಾರ್ಥಕತೆ ಯೊಂದಿಗೆ ಮನುಕುಲದ ಉದ್ಧಾರಕ್ಕೆ ಮಾನವೀಯ ವಾಸ್ತವಿಕ ಸಂದೇಶಗಳನ್ನು ಸಾರಿದ ಮಹನೀಯರಾಗಿದ್ದಾರೆ.
– ಪ್ರೊ. ಸುಧಾ ಹುಚ್ಚಣ್ಣವರ.
ಉಪನ್ಯಾಸಕರು, ಲೇಖಕರು.