ವಿಜಯಸಾಕ್ಷಿ ಸುದ್ದಿ, ಗದಗ: ಒಗ್ಗಟ್ಟಿನಿಂದ ಸಂಘಟನೆ ಬಲಗೊಳ್ಳುತ್ತದೆ. ಒಮ್ಮತದ ಅಭಿಪ್ರಾಯ, ದಿಟ್ಟವಾದ ನಿರ್ಧಾರಗಳಿಂದ ಕೆಲಸ ಕಾರ್ಯಗಳು ಬೇಡಿಕೆಗಳು ಸಾಕಾರಗೊಳ್ಳಬಲ್ಲವು ಎಂದು ಗದುಗಿನ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಗದುಗಿನ ಶಾಂತಾರಾಮ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ತಂಪು ಪಾನೀಯಗಳ, ಜ್ಯೂಸ್ ತಯಾರಕರ ಹಾಗೂ ಐಸ್ಕ್ರೀಮ್ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗದಗ ಪರಿಸರದಲ್ಲಿ ತಂಪು ಪಾನೀಯಗಳ ಜ್ಯೂಸ್ ತಯಾರಕರ ಹಾಗೂ ಐಸ್ಕ್ರೀಮ್ ವ್ಯಾಪಾರಸ್ಥರ ವೃತ್ತಿಯಲ್ಲಿ ಹೊಸತನವನ್ನು ತರುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಇದೀಗ ಈ ಎಲ್ಲ ವ್ಯಾಪಾರಸ್ಥರು ಸಂಘಟಿತರಾಗಿದ್ದು ಅಭಿನಂದನೀಯ. ಸಂಘಟನೆ ಬೆಳೆಯಲಿ, ಸರಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ವ್ಹಿ.ಎಸ್. ಮಾಟಲದಿನ್ನಿ, ಶಿವಯ್ಯ ನಾಲತ್ವಾಡಮಠ ಮಾತನಾಡಿ, ಈ ಸಂಘಟನೆಗೆ ಚೇಂಬರ್ ಸಹಕಾರ ನೀಡುವ ಮೂಲಕ ಸೂಕ್ತ ಮಾರ್ಗದರ್ಶನ ನೀಡಲಿದ್ದು, ಸಂಘಟನೆ ಬಲವರ್ಧನೆಗೊಳ್ಳಲಿ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಗದಗ ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಡಾ. ರಾಜೇಂದ್ರ ಗಡಾದ ಮಾತನಾಡಿ, ತಂಪು ಪಾನೀಯಗಳ ಜ್ಯೂಸ್ ತಯಾರಕರು ಹಾಗೂ ಐಸ್ಕ್ರೀಮ್ ವ್ಯಾಪಾರಸ್ಥರು ಗ್ರಾಹಕರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಗಣೇಶ ಹಬೀಬ, ತಂಪು ಪಾನೀಯಗಳ ಜ್ಯೂಸ್ ತಯಾರಕರ ಹಾಗೂ ಐಸ್ಕ್ರೀಮ್ ವ್ಯಾಪಾರಸ್ಥರನ್ನು ಸಂಘಟಿಸುವ ಮೂಲಕ ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ಒದಗಿಸಲು ಅವಕಾಶಗಳೇನು, ಸರಕಾರದಿಂದ ಸಿಗಬಹುದಾದ ಸೌಲಭ್ಯಗಳೇನು, ನಾವು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು ಎಂದು ಚಿಂತನ-ಮಂಥನಕ್ಕೆ ಈ ಸಂಘಟನೆ ಒಂದು ವೇದಿಕೆಯಾಗಿದೆ ಎಂದರು.
ವೇದಿಕೆಯ ಮೇಲೆ ಗದಗ ಎಸ್.ಎಸ್.ಕೆ ಪಂಚ ಕಮಿಟಿಯ ಅಧ್ಯಕ್ಷ ಫಕ್ಕೀರಸಾ ಭಾಂಡಗೆ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರಸಾ ಪವಾರ ಉಪಸ್ಥಿತರಿದ್ದರು. ದತ್ತು ಬೇವಿನಕಟ್ಟಿ ಹಾಗೂ ರಾಧಾ ಮಾತನಾಡಿದರು. ಸಂಜೀವ ಹಬೀಬ ಪ್ರಾರ್ಥಿಸಿ ನಿರೂಪಿಸಿದರು. ಖಜಾಂಚಿ ಲುಕ್ಕಣಸಾ ರಾಜೋಳಿ ಸ್ವಾಗತಿಸಿ ಪರಿಚಯಿಸಿದರು, ನಂದು ಬೇವಿನಕಟ್ಟಿ ವಂದಿಸಿದರು.
ಸಮಾರಂಭದದಲ್ಲಿ ಯಲ್ಲೋಸಾ ಹಬೀಬ, ಮೋತಿಲಾಲ ಕಬಾಡಿ, ರವೀಂದ್ರಸಾ ಪವಾರ, ಮಂಜುನಾಥ ಕಂದೋಳ್ಳಿ, ಈಶ್ವರಪ್ಪ ಪರಕಾಳಿ, ಸತೀಶ ದೇವಳೆ, ಕೃಷ್ಣಾ ಹಬೀಬ ಸೇರಿದಂತೆ ಗಣ್ಯವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಪಾನೀಯ, ಜ್ಯೂಸ್, ಐಸ್ಕ್ರೀಮ್ ತಯಾರಿಕೆಯಲ್ಲಿ ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ರಾಸಾಯನಿಕವನ್ನು ಬಳಕೆ ಮಾಡಿದಲ್ಲಿ ಇಲಾಖೆಯು ಅಂತಹ ವ್ಯಾಪಾರಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಕಾರಣ ವ್ಯಾಪಾರಸ್ಥರು ಗ್ರಾಹಕರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕೆಂದು ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಡಾ. ರಾಜೇಂದ್ರ ತಿಳಿಸಿದರು.