ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸ್ವಚ್ಛತೆ ಹಾಗೂ ಸೌಂದರ್ಯ ಕಾಪಾಡಿದರೆ ಪರಿಸರ ರಕ್ಷಣೆಯೊಂದಿಗೆ ಆರೋಗ್ಯಕರ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸ್ವಚ್ಛಭಾರತ ಅಭಿಯಾನದಡಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿ ಉದ್ಯಾನವನಗಳು ಸ್ವಚ್ಛವಾಗಿದ್ದರೆ ಅಲ್ಲಿನ ಸುತ್ತಮುತ್ತಲಿನ ಪರಿಸರ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಘನ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಕಾರ್ಯ ಅತೀ ಮುಖ್ಯವಾಗಿದೆ. ನಮ್ಮ ಮನೆಯ ಒಳಗಡೆ ಹೇಗೆ ನಾವು ಸ್ವಚ್ಛತೆ ಕಾಯ್ದುಕೊಳ್ಳುತ್ತೇವೆಯೋ ಹಾಗೆಯೇ ಸಾರ್ವಜನಿಕ ಸ್ಥಳಗಳನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಲು ಶ್ರಮಿಸಬೇಕು. ಸ್ವಚ್ಛತೆಗೆ ಆದ್ಯತೆ ಕೊಟ್ಟು ಪರಿಸರ ಮಾಲಿನ್ಯವನ್ನು ತಡೆಗಟ್ಟಿ ನಗರವನ್ನು ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರಸಭೆ ಸದಸ್ಯರಾದ ಎಲ್.ಡಿ. ಚಂದಾವರಿ ಮಾತನಾಡುತ್ತಾ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರವೂ ಮಹತ್ವದ್ದಾಗಿದೆ. ನಗರದ ಸ್ವಚ್ಛತೆ ಕಾಪಾಡುವುದು ಸ್ವಚ್ಛತಾ ಸಿಬ್ಬಂದಿಯವರೊಂದಿಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿರುತ್ತದೆ. ಕಾಲೇಜುಗಳಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ವಿಲೇವಾರಿ ಕುರಿತು ತಿಳುವಳಿಕೆ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ನಗರಸಭೆ ಸದಸ್ಯರಾದ ಮಹಾಂತೇಶ ನಲವಡಿ, ಸುನಂದಾ ಬಾಕಳೆ, ಶಕುಂತಲಾ ಅಕ್ಕಿ, ಲಕ್ಷ್ಮೀ ಶಂಕರ ಖಾಕಿ, ಮೆಹಬೂಬಸಾಬ ನದಾಫ್, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ನಗರಸಭೆ ಸದಸ್ಯರು, ಸ್ಯಾನಿಟರಿ ಸುಪರ್‌ವೈಸರ್ಸ್, ಕಮ್ಯುನಿಟಿ ಮೊಬಿಲೈಸರ್ಸ್ ಹಾಜರಿದ್ದರು.
ಗದಗ-ಬೆಟಗೇರಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಆನಂದ ಬದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಮಾತನಾಡಿ, ಘನ ತ್ಯಾಜ್ಯ ನಿರ್ವಹಣಾ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. ಕಮ್ಯುನಿಟಿ ಮೊಬಿಲೈಜರ್‌ಗಳು ವಾರ್ಡ್ವಾರು ಮಾಹಿತಿಯನ್ನು ಅಪ್‌ಡೇಟ್ ಮಾಡುತ್ತಾರೆ. ಅವರ ಸಲಹೆಗಳೊಂದಿಗೆ ಸ್ಯಾನಿಟರಿ ಸುಪರ್‌ವೈಸರ್ಸ್ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಗದಗ ನಗರವನ್ನು ಮೂಲಭೂತ ಸೌಕರ್ಯಗಳೊಂದಿಗೆ ಸ್ವಚ್ಛ ನಗರವನ್ನಾಗಿಸಲು ಎಲ್ಲರೂ ಸಹಕರಿಸಬೇಕೆಂದರು.



