ಬೆಂಗಳೂರು: ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತನ್ನು ರಕ್ಷಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿ ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ.
ಇನ್ನು ಮುಂದೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಅಥವಾ ಅಪ್ರಾಪ್ತ ಸಂತ್ರಸ್ತರ ಹೆಸರು, ವಿಳಾಸ ಸೇರಿದಂತೆ ಯಾವುದೇ ರೀತಿಯ ಗುರುತು ಸಾರ್ವಜನಿಕವಾಗಿ ಅಥವಾ ಅಧಿಕೃತ ದಾಖಲೆಗಳಲ್ಲಿ ಬಹಿರಂಗಪಡಿಸುವಂತಿಲ್ಲ ಎಂದು ಆದೇಶಿಸಲಾಗಿದೆ.
ದೂರು ಸ್ವೀಕರಿಸಿದ ಬಳಿಕ ಠಾಣಾಧಿಕಾರಿ ಅಥವಾ ತನಿಖಾಧಿಕಾರಿಯು ಸಂತ್ರಸ್ತರ ಮೂಲ ಹೆಸರನ್ನು ಬದಲಾಯಿಸಿ, ಸಾಂಕೇತಿಕ ಹೆಸರನ್ನು ಬಳಸಬೇಕು. ಎಫ್‌ಐಆರ್‌ನಲ್ಲೂ ಬದಲಾದ ಹೆಸರನ್ನೇ ನಮೂದಿಸಿ, “ಹೆಸರು ಬದಲಿಸಲಾಗಿದೆ” ಎಂದು ಸ್ಪಷ್ಟವಾಗಿ ದಾಖಲಿಸಬೇಕು.
ನ್ಯಾಯಾಲಯಕ್ಕೆ ಸಲ್ಲಿಸುವ ದೂರು ಪ್ರತಿ, ಮಹಜರು ವರದಿ, ಚಾರ್ಜ್‌ಶೀಟ್ ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಇನ್ನು ಮುಂದೆ ‘ಮುಚ್ಚಿದ ಲಕೋಟೆಯಲ್ಲಿ’ (Sealed Cover) ಸಲ್ಲಿಸುವುದು ಕಡ್ಡಾಯವಾಗಿದೆ.
ತನಿಖೆಯ ಯಾವುದೇ ಹಂತದಲ್ಲೂ ಸಂತ್ರಸ್ತರ ವಿವರಗಳು ಸೋರಿಕೆಯಾಗದಂತೆ ತನಿಖಾಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಲಾಗಿದೆ.
ಅನೇಕ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತು ಬಹಿರಂಗವಾಗುವುದರಿಂದ ಸಾಮಾಜಿಕ ಮುಜುಗರ ಹಾಗೂ ಮಾನಸಿಕ ಕಿರುಕುಳ ಉಂಟಾಗುತ್ತಿತ್ತು. ಇದರಿಂದ ನ್ಯಾಯಾಂಗ ಹೋರಾಟದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿತ್ತು. ಸುಪ್ರೀಂಕೋರ್ಟ್ ಆಶಯದಂತೆ ಸಂತ್ರಸ್ತರಿಗೆ ಸಂಪೂರ್ಣ ಸುರಕ್ಷತೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.



