ಚಿಕ್ಕಮಗಳೂರು: ಚಾರ್ಮಾಡಿ ಘಾಟ್ನಲ್ಲಿ ಇಂದು ಒಂದರ ಮೇಲೊಂದು ಮೂರು ರಸ್ತೆ ಅಪಘಾತಗಳು ಸಂಭವಿಸಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಇರುವ ಚಾರ್ಮಾಡಿ ಘಾಟ್ನಲ್ಲಿ ಲಾರಿಗಳು ಪಲ್ಟಿಯಾದ ಪರಿಣಾಮ ಸುಮಾರು 10 ಕಿಲೋಮೀಟರ್ಗೂ ಅಧಿಕ ದೂರ ಟ್ರಾಫಿಕ್ ಜಾಮ್ ಉಂಟಾಗಿದೆ.
ಚಿಕ್ಕಮಗಳೂರು–ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಸಾವಿರಾರು ವಾಹನಗಳು ಪ್ರತಿದಿನ ಇಲ್ಲಿ ಸಂಚರಿಸುತ್ತವೆ. ಆದರೆ ಘಾಟ್ನ ತಿರುವುಗಳು ಮತ್ತು ಇಳಿಜಾರಿನ ಹಿನ್ನೆಲೆ ಅಪಘಾತಗಳು ನಿರಂತರವಾಗುತ್ತಲೇ ಇವೆ. ಇಂದು ನಡೆದ ಮೂರು ಅಪಘಾತಗಳು ಸಂಚಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕುಸಿತಗೊಳಿಸಿವೆ.
ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಲಿ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿಯಾಗಿದೆ. ರಸ್ತೆ ಪಕ್ಕದ ತಡೆಗೋಡೆ ಇಲ್ಲದಿದ್ದರೆ ಲಾರಿ ಪ್ರಪಾತಕ್ಕೆ ಬೀಳುವ ಅಪಾಯ ಇತ್ತು. ಚಾಲಕನಿಗೆ ಸಣ್ಣ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಲಾರಿಯಿಂದ ಡೀಸೆಲ್ ಹಾಗೂ ಆಯಿಲ್ ರಸ್ತೆಗೆ ಹರಿದಿದ್ದು, ಒಂದು ವೇಳೆ ಬೆಂಕಿ ಹೊತ್ತಿಕೊಂಡಿದ್ದರೆ ಲಾರಿ ಮಾತ್ರವಲ್ಲದೆ ಸುತ್ತಲಿನ ಅರಣ್ಯ ಪ್ರದೇಶವೂ ಹೊತ್ತಿ ಉರಿಯುವ ಭೀತಿ ಇತ್ತು. ಅದೃಷ್ಟವಶಾತ್ ಲಾರಿಯಲ್ಲಿ ಖಾಲಿ ಸಿಲಿಂಡರ್ಗಳೇ ಇದ್ದುದರಿಂದ ದೊಡ್ಡ ದುರಂತ ತಪ್ಪಿದೆ.
ಇದಕ್ಕೂ ಮುನ್ನ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಲಾರಿ ಪಲ್ಟಿಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಮತ್ತೊಂದು ಲಾರಿ ಕೂಡ ತಿರುವಿನಲ್ಲಿ ಪಲ್ಟಿಯಾಗಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ವಾಹನಗಳ ಉದ್ದ ಸಾಲು ನಿರ್ಮಾಣವಾಗಿದೆ.
ಪರಿಸ್ಥಿತಿ ನಿಯಂತ್ರಣಕ್ಕಾಗಿ ಬಣಕಲ್ ಪೊಲೀಸರು ಕೊಟ್ಟಿಗೆಹಾರ ಬಳಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ವಾಹನಗಳ ನಿಯಂತ್ರಣ, ಜನರ ಸುರಕ್ಷತೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



