ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳಿಗೆ ಎಕ್ಸ್ಪೈರ್ಡ್ ಸಿರಿಧಾನ್ಯ ಲಡ್ಡು ವಿತರಣೆ ಮಾಡಲಾಗಿದೆ ಎಂಬ ಆರೋಪ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೂರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಕನ್ನಡ ಹೋರಾಟಗಾರ್ತಿ ಕಸ್ತೂರಿಭಾವಿ, ಆರು ತಿಂಗಳ ಹಿಂದೆಯೇ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಿರುವುದನ್ನು ಪತ್ತೆಹಚ್ಚಿದರೆಂದು ತಿಳಿಸಿದ್ದಾರೆ. ಸಂಬಂಧಿಸಿದ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
ವಿಡಿಯೋದಲ್ಲಿ ಹುಳ ಬಿದ್ದ ರವಾ, ಅವಧಿ ಮುಗಿದ ಸಜ್ಜೆ ಲಡ್ಡು, ಸಾಂಬಾರ್ ಪುಡಿ ಮತ್ತು 2025ರ ಅಕ್ಟೋಬರ್ನಲ್ಲಿ ಎಕ್ಸ್ಪೈರ್ಡ್ ಆಗಿರುವ ಮಿಲೆಟ್ ಲಡ್ಡು ವಿತರಣೆ ಮಾಡುತ್ತಿರುವುದು ಗೋಚರಿಸುತ್ತದೆ ಎಂದು ಆರೋಪಿಸಲಾಗಿದೆ.
ಅಂಗನವಾಡಿ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಪೋಷಕರು ಕಿಡಿಕಾರಿದ್ದಾರೆ. ಅವಧಿ ಮುಗಿದ ಆಹಾರ ಸೇವನೆಯಿಂದ ಅಜೀರ್ಣ, ವಾಂತಿ-ಭೇದಿ, ಜ್ವರ ಉಂಟಾಗುವ ಸಾಧ್ಯತೆ ಇರುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.



