ವಿಜಯಸಾಕ್ಷಿ ಸುದ್ದಿ, ಗದಗ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ನೀಡುವ ಮೂಲಕ ಜನರು ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ ನೇತೃತ್ವದ ಭದ್ರ ಹಾಗೂ ಭವ್ಯ ಆಡಳಿತಕ್ಕೆ ವಿಜಯಮಾಲೆ ತೊಡಿಸಿದ್ದಾರೆ ಎಂದು ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಸೇರಿದಂತೆ ದೇಶದ ಜನರ ವಿಶ್ವಾಸ ಕಳೆದುಕೊಂಡಿರುವ ಕೆಲವು ಪಕ್ಷಗಳು ಸೇರಿ ಬಿಜೆಪಿಯನ್ನು ಕಟ್ಟಿಹಾಕುವ ಕನಸು ಕಾಣುತ್ತಿದ್ದವು. ಆದರೆ ಬಿಹಾರ ಜನತೆ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರಕ್ಕೆ ಮಣೆ ಹಾಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ಗಣ್ಯರ ದೂರದೃಷ್ಟಿಗೆ ಬಿಹಾರದ ಜನ ಪುರಸ್ಕಾರ ನೀಡಿದ್ದಾರೆ. ಕುಟುಂಬ ರಾಜಕಾರಣವನ್ನೇ ನಂಬಿಕೊಳ್ಳುವ ಪ್ರಧಾನಿ ಮೋದಿಯವರ ಯಶಸ್ಸಿನಿಂದ ಕಂಗೆಟ್ಟಿರುವ ರಾಹುಲ್ ಗಾಂಧಿ ಮತಗಳ್ಳತನದ ಸುಳ್ಳು ಆರೋಪ ಹೊರಿಸುತ್ತಾ ಜನರ ದಿಕ್ಕು ತಪ್ಪಿಸುವ ವಿಫಲ ಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧೋಗತಿಗೆ ಕಾರಣರಾಗಿರುವ ರಾಹುಲ್ ಗಾಂಧಿ ಅವರನ್ನು ದೇಶದ ಭಾವಿ ಪ್ರಧಾನಿ ಎಂದು ಬಿಂಬಿಸಲು ಹೊರಟಿರುವ ಕಾಂಗ್ರೆಸ್ಸಿಗರ ಪರಿಸ್ಥಿತಿ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಓಲೈಕೆ ಹಾಗೂ ಪಾಳೇಗಾರಿಕೆ ರಾಜಕೀಯಕ್ಕೆ ಬೆಲೆಯಿಲ್ಲ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


