ವಿಜಯಸಾಕ್ಷಿ ಸುದ್ದಿ, ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್‌ಗಳ ಇ-ಕೆವೈಸಿ ವ್ಯಾಲಿಡೇಶನ್ ಅನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಈ ಕಾರ್ಯಕ್ಕೆ ಎಲ್ಲಾ ನರೇಗಾ ಕೂಲಿಕಾರರು ಸಕ್ರಿಯವಾಗಿ ಭಾಗವಹಿಸಿ, ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ರೋಣ ಮತ್ತು ಗಜೇಂದ್ರಗಡ ತಾಲೂಕು ಪಂಚಾಯಿತಿ ಸಿಬ್ಬಂದಿಗಳಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ.ಕಂದಕೂರ ಕರೆ ನೀಡಿದರು.
ರೋಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ಮನರೇಗಾ ಸಿಬ್ಬಂದಿಗಳಾದ ಜಿಕೆಎಂ, ಬಿಎಫ್‌ಟಿ, ಇಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮನರೇಗಾ ಯೋಜನೆಯ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್‌ಗಳನ್ನು ಇ-ಕೆವೈಸಿ ಮೂಲಕ ಪರಿಶೀಲಿಸುವ ಕಾರ್ಯವು ತುರ್ತಾಗಿ ನಡೆಯುತ್ತಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ವ್ಯಾಲಿಡೇಶನ್ ಅನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.ಮನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರ ಮಾಹಿತಿಯನ್ನು
ನಿಎಂಎಸ್ಎಸ್ (ನರೇಗಾ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ತಂತ್ರಾಂಶದಲ್ಲಿ ಇ-ಕೆವೈಸಿ ಮೂಲಕ ಅಪ್‌ಡೇಟ್ ಮಾಡಲಾಗುತ್ತಿದೆ. ಈಗಾಗಲೇ ಗ್ರಾಮ ಮಟ್ಟದಲ್ಲಿ ಜನರಿಗೆ ಈ ಕುರಿತು ಜಾಗೃತಿ ಮೂಡಿಸಲಾಗಿದ್ದು, ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ನರೇಗಾ ಶಾಖೆಯ ಐಇಸಿ ವಿಭಾಗವು ತಯಾರಿಸಿದ ಧ್ವನಿ ಮುದ್ರಿಕೆಯನ್ನು ಕಸ ಸಂಗ್ರಹ ವಾಹನಗಳ ಮೂಲಕ ಪ್ರಸಾರ ಮಾಡಲು ಸೂಚಿಸಲಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಮೇಟ್‌ಗಳ ಮೂಲಕವೂ ಈ ಸೌಲಭ್ಯವನ್ನು ಪಡೆಯಬಹುದು. ಇ-ಕೆವೈಸಿ ಯೋಜನೆಯು ಮನರೇಗಾ ಕಾರ್ಯಕ್ರಮದ ಪಾರದರ್ಶಕ ಅನುಷ್ಠಾನಕ್ಕೆ ಮಹತ್ವದ ಹೆಜ್ಜೆಯಾಗಿದೆ. ಆದ್ದರಿಂದ, ಎಲ್ಲಾ ಕೂಲಿಕಾರರು ಮತ್ತು ಕಾಯಕ ಬಂಧುಗಳು ಕಡ್ಡಾಯವಾಗಿ ಇ-ಕೆವೈಸಿ ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿ, ಡಿಇಒ, ಬಿಎಫ್‌ಟಿ, ಜಿಕೆಎಂ ಅವರನ್ನು ಸಂಪರ್ಕಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದ್ದು, ಈ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಸಭೆಯಲ್ಲಿ ಕರೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಮಟ್ಟದ ಸಿಬ್ಬಂದಿಗಳಿಗೆ ಇ-ಕೆವೈಸಿ ಅಪ್‌ಡೇಟ್ ಕಾರ್ಯಕ್ಕೆ ತರಬೇತಿ ನೀಡಲಾಗಿದ್ದು, ಈ ಮೂಲಕ ಪ್ರಗತಿ ಸಾಧಿಸಲು ಸೂಚನೆ ನೀಡಲಾಗಿದೆ. ಆದರೆ, ಕೆಲವು ಗ್ರಾಮಗಳಲ್ಲಿ ಕೂಲಿಕಾರರು ವೈಯಕ್ತಿಕ ಕೆಲಸಕ್ಕಾಗಿ ಮನೆಯಿಂದ ಹೊರಗಡೆ ಇರುವುದರಿಂದ, ಮನೆ-ಮನೆ ಭೇಟಿಯ ಸಂದರ್ಭದಲ್ಲಿ ಮೇಟ್‌ಗಳು ಅಥವಾ ನರೇಗಾ ಸಿಬ್ಬಂದಿಗೆ ಅವರು ಲಭ್ಯವಾಗದಿರುವುದು ಇ-ಕೆವೈಸಿ ಪ್ರಕ್ರಿಯೆಯನ್ನು ನಿಧಾನಗೊಳಿಸಿದೆ. ಇದರಿಂದ ಭವಿಷ್ಯದಲ್ಲಿ ಕೂಲಿಕಾರರಿಗೆ ಕೆಲಸ ನೀಡುವಾಗ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಚಂದ್ರಶೇಖರ್ ಬಿ.ಕಂದಕೂರ ಎಚ್ಚರಿಕೆ ನೀಡಿದರು.



