ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಿ, ಸತತ 7 ಸಲ ಸಂಸದರಾಗಿ ಆಯ್ಕೆಯಾಗಿ ದೀನ-ದಲಿತರ ಏಳ್ಗೆಗಾಗಿ ತಮ್ಮ ರಾಜಕೀಯ ಜೀವನವನ್ನು ಮುಡಿಪಾಗಿಟ್ಟ ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವರಾದ ಕೆ.ಎಚ್. ಮುನಿಯಪ್ಪ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ದಲಿತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅಂಬೇಡ್ಕರ್ ನಗರದ ಮರುಳ ಸಿದ್ದೇಶ್ವರ ಮಠದ ಹುಚ್ಚಯ್ಯ ಮಹಾಸ್ವಾಮಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ವಾತಂತ್ರ್ಯದ ನಂತರದ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವು ದೊರೆತಿಲ್ಲ. ಕರ್ನಾಟಕ ರಾಜ್ಯದಲ್ಲಿ ದಲಿತ ಸಮುದಾಯವನ್ನು ಕಟ್ಟಿಕೊಂಡು ಕಾಂಗ್ರೆಸ್ ಸರಕಾರ ಅಧಿಕಾರ ಮಾಡಿದೆ. ಆದರೆ ಇದುವರೆಗೂ ಒಬ್ಬ ದಲಿತರನ್ನೂ ಮುಖ್ಯಮಂತ್ರಿ ಮಾಡದೇ ಇರುವುದು ನೋವಿನ ಸಂಗತಿಯಾಗಿದೆ. ಈಗ ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ಸಿನಲ್ಲಿ ಚರ್ಚೆಯಾಗುತ್ತಿದೆ. ಸಿ.ಎಂ ಬದಲಾವಣೆ ಮಾಡುವುದೇ ಆದಲ್ಲಿ ದಲಿತರಿಗೆ ಈ ಅವಕಾಶವನ್ನು ಕಲ್ಪಿಸಬೇಕು. ನಮ್ಮ ಮಾದಿಗ ಸಮುದಾಯದ ಹಿರಿಯರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಆಗಿರುವ ಅಪ್ರತಿಮ ರಾಜಕಾರಣಿ ಕೆ.ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಬೇಕೆಂದು ಹುಚ್ಚಯ್ಯ ಸ್ವಾಮಿಗಳು ಆಗ್ರಹಿಸಿದ್ದಾರೆ.



