ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಕರ್ನಾಟಕ ಸರ್ಕಾರ ಪ್ರತಿ ವರುಷ ಫಾಲ್ಗುಣ ಶುದ್ಧ ತ್ರಯೋದಶಿಯಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲು ನಿರ್ಧರಿಸಿದೆ. ಈ ವರ್ಷ ಮಾರ್ಚ್ 23ರಂದು ಸರ್ಕಾರ ತಾಲೂಕಾ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ ಸೂಚಿಸಿರುವುದು ಸಂತೋಷದ ಸಂಗತಿ. ರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ಸುಸಂದರ್ಭದಲ್ಲಿ ಆಯಾ ಭಾಗದ ವೀರಶೈವ ಲಿಂಗಾಯತ ಸಮುದಾಯ ಅಷ್ಟೇ ಅಲ್ಲ ಸರ್ವರೂ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಶ್ರೀ ಪೀಠದಿಂದ ಕರೆ ನೀಡಿದ್ದಾರೆ.
ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾಮಾನ್ಯರಲ್ಲ. ಜನ ಸಮುದಾಯದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿಗೈದ ಪರಮಾಚಾರ್ಯರು. ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ 18 ಜಾತಿ-ಜನಾಂಗಗಳ ಧಾರ್ಮಿಕ ಕೇಂದ್ರ ಹುಟ್ಟು ಹಾಕಿ ಸಂಸ್ಕಾರ ಸಂಸ್ಕೃತಿ ಅರುಹಿದವರು. ಕಾಯಕ ಮತ್ತು ದಾಸೋಹ ಭಾವನೆ ಮೂಲಕ ಕ್ರಿಯಾತ್ಮಕ ಬದುಕಿಗೆ ಕರೆಕೊಟ್ಟವರು. ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧನೆಗೈದು ಅಸ್ಪಶ್ಯೋದ್ಧಾರಗಗೈದ ಕಾರಣ ಪುರುಷರು. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ಮಿಗಿಲೆಂದು ಸಾರಿದ ಪರಮಾಚಾರ್ಯರು. ಜಾತಿ, ಮತ, ಪಂಥಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಕಾರುಣ್ಯಶೀಲರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಅಂಥ ಮಹಿಮಾನ್ವಿತರ ಜಯಂತಿ ಆಚರಣೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ರಂಭಾಪುರಿ ಶ್ರೀಗಳು ತಿಳಿಸಿದ್ದಾರೆ.