ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಲವರ್ಧನೆಗಾಗಿ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯೋಗಾಭ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ ಆಡಳಿತಾಧಿಕಾರಿ ರಮಣದೀಪ್ ಚೌಧರಿ ತಿಳಿಸಿದರು.
ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕನ್‌ಗುನ್ಯಾ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಯ ಉಪನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಬಿತ್ತನೆ ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಹಿಂಗಾರು ಹಂಗಾಮಿಗೆ ಕಡಲೆ, ಹಿಂಗಾರಿ ಜೋಳ, ಗೋಧಿ, ಸೂರ್ಯಕಾಂತಿ, ಹತ್ತಿ ಪ್ರಮುಖ ಬೆಳೆಗಳಾಗಿವೆ. ರೈತರಿಗೆ ವಿತರಿಸಲು ಸದ್ಯ ರಸಗೊಬ್ಬರ ಸಮಸ್ಯೆ ಇಲ್ಲ. ರಾಜ್ಯ ವಲಯ ಕಾರ್ಯಕ್ರಮಗಳಡಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ ಯೋಜನೆಯಡಿ ಏಪ್ರಿಲ್ 1ರಿಂದ ಆಗಸ್ಟ್ 31ರವರೆಗೆ 365 ಲಕ್ಷ ರೂ. ಗುರಿಯಿದ್ದು, 360.29 ಲಕ್ಷ ರೂ. ವೆಚ್ಚ ಮಾಡಲಾಗಿದೆ ಮತ್ತು ಶೇ. 99 ಗುರಿ ಸಾಧಿಸಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ 110.00 ಲಕ್ಷ ರೂ. ಗುರಿಯಿದ್ದು, 108.25 ಲಕ್ಷ ರೂ. ವೆಚ್ಚ ಮಾಡಿ ಶೇ. 98ರಷ್ಟು ಗುರಿ ಸಾಧಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಏಪ್ರಿಲ್ 1ರಿಂದ ಆಗಸ್ಟ್ 31ರವರೆಗೆ 53 ಡೆಂಗ್ಯೂ ಜ್ವರ ಪ್ರಕರಣಗಳು, 2 ಚಿಕನ್‌ಗುನ್ಯಾ ಪ್ರಕರಣಗಳು ಖಚಿತಪಟ್ಟಿವೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಾಲಾ ಶಿಕ್ಷಣ, ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಚಳಗೆರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಮಾತನಾಡಿ, ತೋಟಗಾರಿಕೆ ಕ್ಷೇತ್ರಗಳ ನಿರ್ವಹಣೆ ಯೋಜನೆಯಡಿ ಆಗಸ್ಟ್ 31ರ ಅಂತ್ಯದವರೆಗೆ 4.19 ಲಕ್ಷ ರೂ.ಗಳ ಗುರಿಯಿದ್ದು, 4.07 ಲಕ್ಷ ರೂ. ವೆಚ್ಚ ಮಾಡಿ ಶೇ. 97ರಷ್ಟು ಗುರಿ ಸಾಧಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 273 ಲಕ್ಷ ರೂ. ಗುರಿಯಿದ್ದು, ಆ ಪೈಕಿ 262.45 ಲಕ್ಷ ರೂ. ವೆಚ್ಚ ಮಾಡಿ ಶೇ.96ರಷ್ಟು ಗುರಿ ಸಾಧಿಸಲಾಗಿದೆ. ಬರುವ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಇಲಾಖೆಯಿಂದ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.