ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನ ಯಶಸ್ವಿಗೊಳಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕುಷ್ಟರೋಗವು ಮೈಕೋ ಬ್ಯಾಕ್ಟೀರಿಯಮ್ ಲೆಫ್ರಿ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಮುಖ್ಯವಾಗಿ ಇದು ಚರ್ಮ ಹಾಗೂ ನರಗಳಿಗೆ ಸಂಬಂಧಿಸಿದ ರೋಗವಾಗಿದೆ. ಇದನ್ನು ಎಮ್‌ಡಿಟಿ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದ್ದು, ನವೆಂಬರ್ 24ರಿಂದ ಡಿಸೆಂಬರ್ 9ರವರೆಗೆ ನಡೆಯಲಿರುವ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಎನ್. ಲಿಂಗದಾಳ ಸಮೀಕ್ಷಣಾ ತಂಡಕ್ಕೆ ಸೂಚಿಸಿದರು.

Advertisement

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಷ್ಟರೋಗ ವಿಭಾಗ ಗದಗ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಡವಿಸೋಮಾಪೂರ, ಲಕ್ಕುಂಡಿ ಮತ್ತು ಹಾತಲಗೇರಿ ಗ್ರಾಮದಲ್ಲಿ ಅಭಿಯಾನದ ಪೂರ್ವಭಾವಿ ಸಭೆ ಹಾಗೂ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಸಮೀಕ್ಷಾ ತಪಾಸಣೆ ಕಾರ್ಯಕ್ರಮವನ್ನು ಆರಂಭಿಸಿ ಪ್ರತಿದಿನ 20 ಮನೆಗಳ ವರದಿಯನ್ನು ಮೇಲ್ವಿಚಾರಕರಿಗೆ ತಲುಪಿಸಬೇಕು. ಪ್ರತಿಯೊಬ್ಬರಿಗೂ ಕುಷ್ಟರೋಗದ ಬಗ್ಗೆ ಅರಿವು ಮೂಡಿಸುವಲ್ಲಿ ಗುಂಪು ಸಭೆ ನಡೆಸಿ. ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ, ತಾಮ್ರ ವರ್ಣದ ಸ್ಪರ್ಶಜ್ಞಾನ ಇಲ್ಲದ ತದ್ದು ಮಚ್ಚೆಗಳು ಇದ್ದರೆ ಅಥವಾ ಕಣ್ಣಿನ ರೆಪ್ಪೇಗಳು ಉದುರಿದ್ದರೆ ಅವು ಕುಷ್ಟರೋಗದ ಲಕ್ಷಣ ಇರಬಹುದು. ಈ ಬಗ್ಗೆ ಪ್ರತಿಯೊಂದು ಮನೆಯವರಿಗೆ ಅರಿವನ್ನು ಮೂಡಿಸಬೇಕೆಂದು ಹೇಳಿದರು.

ಅಧ್ಯಕ್ಷತೆಯನ್ನು ವೈದ್ಯಾಧಿಕಾರಿ ಡಾ. ವರ್ಷಾ ಬ್ಯಾಲಿಹಾಳ ವಹಿಸಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಸ್.ಬಿ. ಗಡಾದ, ವೈ.ಎನ್. ಕಡೆಮನಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಹುಲಿಗೆಮ್ಮ ಮಾದರ, ಚಂದ್ರಪ್ರಭಾ ತೋಟದ, ಗಂಗಮ್ಮ ಕುಂಬಾರ, ಸಲ್ಮಾ ಕುಕನೂರ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಗಾಯತ್ರಿ ಬಡಿಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಮುತ್ತಪ್ಪ ಹಟ್ಟಿಮನಿ ಮಾತನಾಡಿ, ಕುಷ್ಟರೋಗವನ್ನು ಮುಖ್ಯವಾಗಿ ದೇಹದ ಯಾವುದೇ ಭಾಗದಲ್ಲಿ ಕಂಡುಬರುವ ತಿಳಿ ಬಳಿ ಅಥವಾ ತಾಮ್ರ ಬಣ್ಣದ ಸ್ಪರ್ಶಜ್ಞಾನ ಇಲ್ಲದೆ ಇರುವ ಮಚ್ಚೆಗಳು ಮತ್ತು ಚರ್ಮ, ಕಿವಿಯ ಹಾಲೆ ಮುಖ ಮತ್ತು ಕೈಕಾಲುಗಳ ಮೇಲೆ ಕಂಡುಬರುವ ಗಂಟುಗಳು, ಊದಿಕೊಂಡ ನರಗಳು ಕಂಡುಬಂದರೆ ಮಾಹಿತಿಯನ್ನು ನೀಡಿ ಸಹಕರಿಸಬೇಕು ಹೇಳಿದರು.


Spread the love

LEAVE A REPLY

Please enter your comment!
Please enter your name here