ಬ್ಯಾಂಕಿನ ಸೇವೆಗಳನ್ನು ಸದ್ಬಳಕೆ ಮಾಡಿಕೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬ್ಯಾಂಕಿನ ಉಳಿತಾಯ ಖಾತೆ ಸೇರಿದಂತೆ ಇತರೆ ಸೇವೆಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನದ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಬೇಕೆಂದು ಸೆಂಟ್ರಲ್ ಬ್ಯಾಂಕ್ ಡಿಜಿಎಮ್ ರೀಜನಲ್ ಮುಖ್ಯಸ್ಥ ದೊಡ್ಡರಂಗಪ್ಪ ಹೇಳಿದರು.

Advertisement

ಸಮೀಪದ ಮಾರನಬಸರಿ ಗ್ರಾಮದಲ್ಲಿ ಸೆಂಟ್ರಲ್ ಬ್ಯಾಂಕ್ ಹಾಗೂ ಲೀಡ್ ಬ್ಯಾಂಕ್ ಸಹಯೋಗದಲ್ಲಿ ಗ್ರಾಹಕರ ಸಾಮಾಜಿಕ ಭದ್ರತೆಯ ಯೋಜನೆಗಾಗಿ ಹಮ್ಮಿಕೊಂಡಿದ್ದ ಮೂರು ತಿಂಗಳಿನ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ರಾಹಕರು ಈಗಿನಿಂದಲೇ ಹಣ ಉಳಿತಾಯ ಮಾಡುವದನ್ನು ಕಲಿತುಕೊಳ್ಳಬೇಕು. ದುಂದು ವೆಚ್ಚ ಮಾಡುವದರಿಂದ ನಿಮ್ಮ ಆರ್ಥಿಕ ಸ್ಥಿತಿ ಹಿನ್ನಡೆಯಾಗುತ್ತದೆ. ನೀವು ಸಂಪಾದನೆ ಮಾಡಿದ ಹಣದಲ್ಲಿ ಸ್ವಲ್ಪ ಹಣವನ್ನು ಬ್ಯಾಂಕಿನಲ್ಲಿ ತೊಡಗಿಸುವದರಿಂದ ಮುಂದಿನ ನಿಮ್ಮ ಕಷ್ಟಗಳಿಗೆ ಸಹಾಯವಾಗುತ್ತದೆ. ನಮ್ಮಲ್ಲಿ ಅಪಘಾತ ವಿಮೆ ಸಹ ಇದ್ದು, ಯಾವುದಾದರೂ ತೊಂದರೆಯಾದಲ್ಲಿ ನಿಮ್ಮ ಕುಂಟುಬಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಮಾತನಾಡಿ, ಮೂರು ತಿಂಗಳ ಹಣಕಾಸು ಸೇರ್ಪಡೆ ಪೂರ್ಣತೆ ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಒಂದು ಶಿಬಿರ ನಡೆಸಬೇಕಾಗಿದ್ದು ನಮ್ಮ ಮೇಲಾಧಿಕಾರಿಗಳ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಿ ತಿಂಗಳಿಗೆ 1000ದಿಂದ 5000 ಸಾವಿರ ರೂ.ವರೆಗೆ ಖಾತರಿಯ ಪಿಂಚಣೆ ಪಡೆಯುವ ಅವಕಾಶವಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಗ್ರಾ.ಪಂ ಅಧ್ಯಕ್ಷ ವೀರಣ್ಣ ಮರಡಿ, ಸರ್ವ ಸದಸ್ಯರು, ಪಿಡಿಓ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ನರೇಗಲ್ಲ ಸೆಂಟ್ರಲ್ ಬ್ಯಾಂಕ್ ಮ್ಯಾನೇಜರ ನರೇಂದ್ರ ಎಚ್ ಸ್ವಾಗತಿಸಿ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here