ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನೆಯೇ ಮೊದಲ ಪಾಠಶಾಲೆ-ತಾಯಿಯೇ ಮೊದಲ ಗುರು ಎನ್ನುವಂತೆ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಮತ್ತು ಪಾತ್ರವಿದೆ. ಸಮಾಜದ ಕಣ್ಣಾಗಿರುವ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ನಿವೃತ್ತ ಶಿಕ್ಷಕಿ ಶಿವಲೀಲಾ ಅಂಗಡಿ ಅಭಿಪ್ರಾಯಪಟ್ಟರು.
ಅವರು ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮಗಳು, ಪತ್ನಿ, ತಾಯಿ, ಸ್ನೇಹಿತೆ, ಮಾರ್ಗದರ್ಶಿಯಾಗಿ ಮಹಿಳೆ ಸಮಾಜದ ಕಣ್ಣಾಗಿ ಕಾರ್ಯನಿರ್ವಹಿಸುತ್ತಾಳೆ. ಮಹಿಳೆಯರು ಮೊದಲು ತಮ್ಮ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವದ ಜೊತೆಗೆ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಪರಿಚಯ ಮಾಡಿಕೊಡಿ. ಅವುಗಳನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿರಿಯರಾದ ಗಿರಿಜಾ ಮುದಗಲ್ ಮಾತನಾಡಿ, ಬದಲಾಗುತ್ತಿರುವ 21ನೇ ಶತಮಾನದಲ್ಲಿರುವ ನಾವು ಇನ್ನೂ ಮಹಿಳೆಯರ ದಿನಾಚರಣೆ ಆಚರಿಸುತ್ತಿರುವುದು ಎಷ್ಟು ಸೂಕ್ತ, ಪ್ರತಿದಿನವೂ ಮಹಿಳೆಯರ ದಿನವಾಗಿದೆ. ಸಿಪಾಯಿ ಕೆಲಸದಿಂದ ಹಿಡಿದು ಉನ್ನತ ಹುದ್ದೆಗಳನ್ನು ನಿರ್ವಹಿಸುವದು, ಗ್ರಾ.ಪಂ ಸದಸ್ಯೆಯಾಗುವದರಿಂದ ಹಿಡಿದು ರಾಷ್ಟ್ರಪತಿಯಂತಹ ಉನ್ನತ ಹುದ್ದೆಯನ್ನು ನಿಭಾಯಿಸುವ ಸಾಮರ್ಥ್ಯ ಇರುವದು ಹೆಣ್ಣಿನಲ್ಲಿ. ಪ್ರತಿಯೊಂದು ರಂಗದಲ್ಲಿಯೂ ತನ್ನ ಛಾಪು ಹೊಂದಿರುವ ಮಹಿಳೆಯು ಈ ಜಗತ್ತಿನ ಶ್ರೇಷ್ಠತೆಯ ಸಂಕೇತವಾಗಿದ್ದಾಳೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ `ಜಿ.ನಾರಾಯಣಸ್ವಾಮಿ ಪ್ರಶಸ್ತಿ’ಗೆ ಭಾಜನರಾದ ದಿಗಂಬರ ಪೂಜಾರ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಆಟೋಟಗಳು ನಡೆದವು. ಮಹಿಳಾ ಘಟಕದ ಸಂಸ್ಥಾಪಕಿ, ನಿವೃತ್ತ ಶಿಕ್ಷಕಿ ಶಕುಂತಲಾ ಹೊರಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ನಡೆದು ಬಂದ ದಾರಿಯನ್ನು ವಿವರಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮವ್ವ ಆಚಾರಿ, ಸುವರ್ಣಬಾಯಿ ಬಹದ್ದೂರದೇಸಾಯಿ, ರೋಹಿಣಿಬಾಯಿ ಬಹದ್ದೂರದೇಸಾಯಿ ಮುಂತಾದವರಿದ್ದರು.
ಗುರುಬಾಯಿ ಹುಲಸೂರ, ಹೇಮಾ ಬಾಳಿಕಾಯಿ, ಅಂಬಿಕಾ ಪಟ್ಟಣಶೆಟ್ಟಿ ಮತ್ತಿತರರು ಮಾತನಾಡಿದರು. ಅನ್ನಪೂರ್ಣ ಬೊಮ್ಮನಹಳ್ಳಿ ಪ್ರಾರ್ಥಿಸಿದರು, ಶೈಲಾ ಆದಿ ಸ್ವಾಗತಿಸಿದರು. ಪೂರ್ಣಿಮಾ ಪಾಟೀಲ ಮತ್ತು ಪೂರ್ಣಿಮಾ ಬಳಿಗಾರ ಪರಿಚಯಿಸಿದರು. ವಿದ್ಯಾ ಮಹಾಂತಶೆಟ್ಟರ, ಅನ್ನಪೂರ್ಣ ಸಾತಣ್ಣವರ, ಗಿರಿಜಕ್ಕ ಹತ್ತಿಕಾಳ, ಸುನಂದಾ ಆಚಾರಿ, ಕಾವ್ಯಾ ದೇಸಾಯಿ, ಸೇರಿದಂತೆ ಅನೇಕರು ಹಾಜರಿದ್ದರು. ನಿವೃತ್ತ ಶಿಕ್ಷಕಿ ಜಯಶ್ರೀ ಮೆಳ್ಳಿಗೇರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಮಹಾಂತಶೆಟ್ಟರ ಮಾತನಾಡಿ, ಮಹಿಳೆ ಕೇವಲ ಗೃಹಿಣಿಯಾಗಿ ತನ್ನ ಪಾಲಿನ ಕೆಲಸ ಇಷ್ಟೇ ಎಂದುಕೊಳ್ಳಬಾರದು. ಅದರ ಹೊರತಾಗಿ ತನಗೂ ಸಾಮಾಜಿಕ ಜವಾಬ್ದಾರಿಗಳಿವೆ ಎಂದರಿತು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುವ ಮನಸ್ಥಿತಿ ಹೊಂದಬೇಕು. ಮಕ್ಕಳಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿ ಉತ್ತಮ, ಶಿಕ್ಷಣ, ಸಂಸ್ಕಾರ ನೀಡಬೇಕು ಎಂದರು.


