ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಹಸುವಿನ ಮಾಲೀಕರಾದ ಚಂದು, ಸಿದ್ದರಾಜು, ಸಂಪು ಹಾಗೂ ಗಣೇಶ ಎಂಬವರು ಹುಲಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಿದೆ.
ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಅಕ್ಟೋಬರ್ 2ರಂದು ಹುಲಿಯನ್ನು ಮೂರು ಭಾಗಗಳಾಗಿ ತುಂಡರಿಸಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ತಲೆಯಿಂದ ಭುಜದವರೆಗೆ ಒಂದು ಭಾಗ, ಭುಜದಿಂದ ಹೊಟ್ಟೆವರೆಗೆ ಮತ್ತೊಂದು ಭಾಗ ಹಾಗೂ ಕೆಳಭಾಗವನ್ನು ಪ್ರತ್ಯೇಕವಾಗಿ ಕತ್ತರಿಸಲಾಗಿತ್ತು.
ವನ್ಯಜೀವಿ ಸಪ್ತಾಹದ ಸಂದರ್ಭದಲ್ಲೇ ಇಂತಹ ಅಮಾನವೀಯ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ಮೂರು ತಿಂಗಳ ಅವಧಿಯಲ್ಲಿ ಇದೇ ವನ್ಯಧಾಮದಲ್ಲಿ ಸ್ಥಳೀಯರ ಪ್ರತೀಕಾರಕ್ಕೆ ಆರು ಹುಲಿಗಳು ಬಲಿಯಾಗಿರುವುದು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.



