ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಡಳಿತ, ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘದ ವತಿಯಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ 603ನೇ ಜಯಂತಿಯನ್ನು ಮೇ. 10ರಂದು ಬೆಳಿಗ್ಗೆ 10:30ಕ್ಕೆ ಕಳಸಾಪೂರ ರಸ್ತೆಯ ಶ್ರೀ ಶಿವಾನಂದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದು, ಜಯಂತಿಯ ಅಂಗವಾಗಿ ಮುತ್ತೈದೆಯರಿಗೆ ಉಡಿ ತುಂಬುವದು, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಹಾಗೂ ದಾನಿಗಳಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಶೈಲಜಾ ಕವಲೂರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಪಾಲ್ಗೊಳ್ಳಲಿದ್ದಾರೆ. ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕ ಡಿ.ಆರ್. ಪಾಟೀಲ ಆಗಮಿಸಲಿದ್ದು, ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಹಾನ್ ಶರಣೆ, ಭಕ್ತ ಶಿರೋಮಣಿ, ತ್ಯಾಗ ಮತ್ತು ನಿಷ್ಠೆಯ ಹೇಮರಡ್ಡಿ ಮಲ್ಲಮ್ಮನವರ ಪುಣ್ಯ ಜಯಂತಿಯನ್ನು ಆಚರಿಸುತ್ತಿದ್ದೇವೆ. ಹೇಮರಡ್ಡಿ ಮಲ್ಲಮ್ಮನವರ ಜೀವನವು ಭಕ್ತಿ, ಶ್ರದ್ಧೆಯ ಉತ್ತಮ ನಿದರ್ಶನವಾಗಿದೆ. ಸಂಸಾರದಲ್ಲಿದ್ದುಕೊಂಡೇ ಆಧ್ಯಾತ್ಮ ಸಾಧನೆಯನ್ನು ಮಾಡಿದವರು. ಅವರ ಕಾಯಕ ನಿಷ್ಠೆ, ಅತಿಥಿ ಸತ್ಕಾರ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮೇಲೆಯೂ ತೋರಿದ ಕರುಣೆ ಮತ್ತು ಸಮಾನತೆಯ ಭಾವನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.
ಕಾರ್ಯಕ್ರಮ ಯಶಸ್ವಿಗೊಳಿಸಲು ಸಮಾಜದ ಪ್ರಮುಖ ಮುಖಂಡರು ಕಳೆದ ಒಂದು ತಿಂಗಳಿಂದ ಹಲವಾರು ಸಲ ಪೂರ್ವಭಾವಿ ಸಭೆಗಳನ್ನು ನಡೆಸಿ ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರಮುಖ ಪಟ್ಟಣ ಮತ್ತು ಗ್ರಾಮಗಳಿಗೆ ಭೇಟಿ ಕೊಟ್ಟು ಆಮಂತ್ರಣ ಪತ್ರಿಕೆಗಳನ್ನು ನೀಡಲಾಗಿದೆ. ಸದರಿ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾರಣ, ಗದಗ ಜಿಲ್ಲೆಯ ರಡ್ಡಿ ಸಮಾಜ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಿ, ಹೇಮರಡ್ಡಿ ಮಲ್ಲಮ್ಮನವರ ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುಮಾ ಶಿವನಗೌಡರ, ಶೈಲಾ ಬೆಂತೂರ, ಸವಿತಾ ಹೊಸಮನಿ, ಪ್ರೇಮಾ ಮೇಟಿ, ಕಸ್ತೂರಿ ಹಿರೇಗೌಡ್ರ, ಭಾಗ್ಯ ಶಿರೋಳ, ಯಶೋಧಾ ಗದ್ದಿಕೇರಿ, ಸುನೀತಾ ಕೋನರಡ್ಡಿ, ಲತಾ ಮುಂಬಾರಡ್ಡಿ, ಶೋಭಾ ಭೂಮರಡ್ಡಿ, ರಾಜಶ್ರೀ ಶಿರೋಳ, ಸೌಮ್ಯ ಹುಚ್ಚಣ್ಣವರ ಮುಂತಾದವರು ಉಪಸ್ಥಿತರಿದ್ದರು.
ಮಲ್ಲಮ್ಮನವರು ಕೇವಲ ಒಂದು ಧರ್ಮಕ್ಕೆ ಸೀಮಿತರಾಗದೆ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದರು. ಸರಳತೆ, ಸಜ್ಜನಿಕೆ ಮತ್ತು ನಿಸ್ವಾರ್ಥ ಸೇವೆ ಇವು ಹೇಮರಡ್ಡಿ ಮಲ್ಲಮ್ಮನವರ ವ್ಯಕ್ತಿತ್ವದ ಪ್ರಮುಖ ಗುಣಗಳಾಗಿದ್ದವು. ಇಂದಿನ ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಬೇಕಾದರೆ ಹೇಮರಡ್ಡಿ ಮಲ್ಲಮ್ಮನಂತಹ ಶರಣರು ತೋರಿದ ದಾರಿಯಲ್ಲಿ ನಡೆಯುವದು ಅತ್ಯಗತ್ಯವಾಗಿದೆ ಎಂದು ಶೈಲಜಾ ಕವಲೂರ ಹೇಳಿದರು.