ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯ್ತಿ ವೇಳೆ ಮೀನುಗಾರರ ಮುಖಂಡನಿಗೆ ಚಾಕು ಇರಿದ ಘಟನೆ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ. ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಲ್ಪೆ ಮೂಲದ ಯುವಕ ಹಾಗೂ ಪಡುಬಿದ್ರಿ ಪಲಿಮಾರು ಭಾಗದ ಯುವತಿಯ ಪ್ರೇಮ ಸಂಬಂಧದ ಕುರಿತು ಮಾತುಕತೆ ನಡೆಸಲು ಯುವತಿಯ ಕಡೆಯವರು ಬಂದಿದ್ದರು. ಈ ವೇಳೆ ಉಂಟಾದ ವಾಗ್ವಾದ ತೀವ್ರಗೊಂಡು ಮಂಜು ಕೊಳ ಅವರಿಗೆ ಚಾಕು ಇರಿಯಲಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಅವರು ಪೊಲೀಸ್ ವಶದಲ್ಲಿದ್ದಾರೆ. ಘಟನೆ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



