‘ಪ್ರೇಮುಲು’ ಚಿತ್ರದ ಮೂಲಕ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಮಲಯಾಳಂ ನಟಿ ಮಮಿತಾ ಬೈಜು, ಇದೀಗ ಅನಿರೀಕ್ಷಿತ ಟ್ರೋಲ್‌ಗೆ ಗುರಿಯಾಗಿದ್ದಾರೆ. ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಮಿತಾ ಹಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸಿನಿಮಾದಲ್ಲಿ ಮಮಿತಾ, ವಿಜಯ್ ಅವರ ಸಾಕು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಲವು ದಿನಗಳ ಶೂಟಿಂಗ್ ವೇಳೆ ಇಬ್ಬರ ನಡುವೆ ಉತ್ತಮ ಬಾಂಧವ್ಯ ನಿರ್ಮಾಣವಾಗಿತ್ತು. ಇದೇ ಆತ್ಮೀಯತೆಯಿಂದ ಮಮಿತಾ ವಿಜಯ್ ಎದುರು ಹಾಡು ಹಾಡಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಮಮಿತಾ ಹಾಡಿದ ‘ಎಲ್ಲಾ ಪುಗಳುಮ್’ ಹಾಡು ಟ್ರೋಲಿಗರ ಟಾರ್ಗೆಟ್ ಆಗಿದೆ. ಈ ಹಾಡು 2007ರಲ್ಲಿ ಬಿಡುಗಡೆಯಾದ ‘ಅಳಗಿಯ ತಮಿಳ ಮಗನ್’ ಸಿನಿಮಾದ ಜನಪ್ರಿಯ ಹಾಡಾಗಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಒರಿಜಿನಲ್ ಹಾಡಿನೊಂದಿಗೆ ಹೋಲಿಸಿ ಮಮಿತಾ ಹಾಡನ್ನು ಮೀಮ್ಸ್ ಮೂಲಕ ಟೀಕಿಸಲಾಗುತ್ತಿದೆ.
ಈ ವೇಳೆ ವಿಜಯ್ ಅವರ ಮುಖಭಾವ ಸಿಟ್ಟಿನಿಂದ ಇದ್ದಂತೆ ಕಾಣಿಸಿಕೊಂಡಿದ್ದು, ಅದನ್ನೇ ಕ್ಯಾಪ್ಚರ್ ಮಾಡಿ ಟ್ರೋಲ್‌ಗಳು ಹರಿದಾಡುತ್ತಿವೆ. “ನಾವು ಬೇಡಿದ್ದು ಏನು – ದೇವರು ಕೊಟ್ಟಿದ್ದು ಏನು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋಗಳು ವೈರಲ್ ಆಗಿವೆ.
ಇನ್ನೊಂದೆಡೆ, ಸೆನ್ಸಾರ್ ಮಂಡಳಿಯ ಸಮಸ್ಯೆಯಿಂದ ‘ಜನ ನಾಯಗನ್’ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.



