ಬೆಳಗಾವಿ: ಜಿಲ್ಲೆಯ ಗೋಕಾಕ್ ನಗರದ ಕೋರ್ಟ್ ಸರ್ಕಲ್ ಬಳಿ ಕಾರಿನಲ್ಲಿ ರಿವಾಲ್ವರ್ ಇಟ್ಟು ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆದು ಪೊಲೀಸರು ಪರಿಶೀಲನೆ ನಡೆಸಿದ ವೇಳೆ, ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಲೈಸನ್ಸ್ ಹೊಂದಿದ್ದ ರಿವಾಲ್ವರ್ ಪತ್ತೆಯಾಗಿದೆ.
ಬಂಧಿತನನ್ನು ಬಾಗಲಕೋಟೆ ಜಿಲ್ಲೆಯ ನಿವಾಸಿ ರಮೇಶ್ ಕೇಸರಗೊಪ್ಪ ಚೌವಾಣ (52) ಎಂದು ಗುರುತಿಸಲಾಗಿದೆ. ರಿವಾಲ್ವರ್‌ಗೆ ಲೈಸನ್ಸ್ ಇದ್ದರೂ ಅದು ಬಾಗಲಕೋಟೆ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಜೊತೆಗೆ, ಶಸ್ತ್ರಾಸ್ತ್ರ ಪರವಾನಗಿಯ ನವೀಕರಣ ಅವಧಿ ಮುಗಿದಿದ್ದರೂ, ಸಂಬಂಧಿತ ಪೊಲೀಸ್ ಠಾಣೆಗೆ ಶಸ್ತ್ರವನ್ನು ಜಮಾ ಮಾಡದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಗೋಕಾಕ್ ಶಹರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



