ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಮಾಟಗೇರಿಯಲ್ಲಿ ಕೂಲಿ ಹಣ ನೀಡಿಲ್ಲ ಎಂದು ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಜರುಗಿದೆ. ರವೀಶ ಗಣಪತಿ ಚನ್ನಯ್ಯ (40) ಕೊಲೆಯಾದ ವ್ಯಕ್ತಿ. ಮಂಜುನಾಥ ಬಸ್ಯಾ ಚನ್ನಯ್ಯ ಕೊಲೆ ಮಾಡಿದ ಆರೋಪಿ.
Advertisement
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ದಿನಗೂಲಿ ಹಣಕ್ಕಾಗಿ ವಾದಿರಾಜ ಮಠದ ಕಮಾನಿನ ಬಳಿ ಇಬ್ಬರ ನಡುವೆ ವಾಗ್ವಾದವಾಗಿತ್ತು. ಸಿಟ್ಟಿನಲ್ಲಿ ರವೀಶ್ ಗಣಪತಿ ಚನ್ನಯ್ಯನಿಗೆ ಮಂಜುನಾಥ ಬಸ್ಯಾ ಕೆಲಸಕ್ಕಾಗಿ ತಂದಿದ್ದ ಗುದ್ದಲಿಯ ಸಲಾಕೆಯಿಂದ ಏಕಾಏಕಿ ತಲೆಗೆ ಹೊಡೆದಿದ್ದಾನೆ.
ಗಂಭೀರ ಗಾಯದಿಂದ ರಕ್ತಸ್ರಾವವಾಗಿ ರವೀಶ ಗಣಪತಿ ಚನ್ನಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಗೀತಾ ಪಾಟಿಲ್, ಸಿಪಿಐ ಶಶಿಕಾಂತ ವರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶಿರಸಿ ಪಂಡಿತ್ ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ.