ಗದಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪಾಪಿ ವ್ಯಕ್ತಿಯೊಬ್ಬ ಮೂವರು ಮಕ್ಕಳನ್ನು ನದಿಗೆ ಎಸೆದು ತಾನು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮುಂಜಾನೆ ಇಬ್ಬರು ಮಕ್ಕಳ ಶವ ಸಮೇತ ಮೂವರು ಮೃತದೇಹಗಳು ಪತ್ತೆಯಾಗಿವೆ.
ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಶವಗಳನ್ನು ಹೊರ ತೆಗೆದಿದ್ದಾರೆ.
ಎರಡು ದಿನಗಳ ಕಾಲ ನಿರಂತರ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರಿಂದ ಜಂಟಿ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ.
ಮಂಜುನಾಥ ಅರಕೇರಿ (40) ಹಾಗೂ ಮಕ್ಕಳಾದ ವೇದಾಂತ್ (3) ಧನ್ಯ (6) ಪವನ್ (4) ಸೇರಿದಂತೆ ನಾಲ್ವರು ಶವ ಪತ್ತೆಯಾಗಿವೆ. ನಿನ್ನೆ ರಾತ್ರಿ ವೇದಾಂತ ಮೃತ ದೇಹ ಪತ್ತೆಯಾಗಿತ್ತು.
ಇನ್ನೂ ಇಂದು ಬೆಳಗ್ಗೆ ಎರಡು ಮಕ್ಕಳು, ತಂದೆ ಶವಕ್ಕಾಗಿ ಶೋಧ ನಡೆಸಿದ್ದ ವೇಳೆ, ಧನ್ಯಾಳ ಮೃತ ದೇಹ ಎರಡು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದ್ದು, ತುಂಬಿ ಹರಿಯುವ ನದಿಯಲ್ಲಿ ಎರಡು ಮಷಿನ್ ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ತೆಪ್ಪಗಳಲ್ಲಿ ಸ್ಥಳೀಯ ಮೀನುಗಾರರಿಂದ ಶೋಧ ನಡೆಸಿ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಮುಂಡರಗಿ ಪೊಲೀಸರು, ತಹಸೀಲ್ದಾರ ಸೇರಿದಂತೆ ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.