ಗದಗ:- ಚರ್ಚ್ ಬಿಲ್ಡಿಂಗ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯ ಶಾಲೋಮ್ ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ಜರುಗಿದೆ.
ಮುಂಡರಗಿ ತಾಲೂಕಿನ ಹಾರೊಗೇರಿ ಗ್ರಾಮದ ತಿಪ್ಪಣ್ಣ ವಡ್ಡರ್ ಮೃತ ವ್ಯಕ್ತಿ. ಡೆತ್ ನೋಟ್ ನಲ್ಲಿ ಚರ್ಚ್ ವ್ಯವಸ್ಥಾಪಕರ ಹೆಸರು ಬರೆದಿಟ್ಟು ನೇಣಿಗೆ ಶರಣಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಐದು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ತಿಪ್ಪಣ್ಣ ಪ್ರತಿ ಭಾನುವಾರ ಈ ಚರ್ಚ್‌ಗೆ ಪ್ರಾರ್ಥನೆಗಾಗಿ ಬರುತ್ತಿದ್ದರು. ಭಾನುವಾರ ಬೆಳಗ್ಗೆ ಪ್ರಾರ್ಥನೆ ಮುಗಿಸಿ, ರಾತ್ರಿ ನೇಣು ಬಿಗಿದುಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ ಚರ್ಚ್ ವ್ಯವಸ್ಥಾಪಕ ವಿನಯ್ ಗಜಾನನ್ ಮತ್ತು ಅವರ ತಾಯಿ ಭಾರತಿ ಅವರ ಹೆಸರು ಉಲ್ಲೇಖವಾಗಿದೆ ಎನ್ನಲಾಗಿದೆ. ಅಲ್ಲದೆ “ಪ್ರಾರ್ಥನೆ ಸಮಯದಲ್ಲಿ ಫಾಸ್ಟರ್ ವಿನಯ್ ಅಸಹ್ಯ ವರ್ತನೆ ತೋರಿದ್ದರು” ಎಂಬುವುದನ್ನು ಕೂಡ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ. ಇದರಿಂದ ಆತ್ಮಹತ್ಯೆಗೆ ಈ ಇಬ್ಬರೂ ಕಾರಣರಾಗಿರಬಹುದು ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.
ಘಟನೆ ಬಳಿಕ ಶ್ರೀರಾಮ ಸೇನೆ ಕಾರ್ಯಕರ್ತರು ಚರ್ಚ್ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಚರ್ಚ್‌ನಲ್ಲಿ ಅನಧಿಕೃತವಾಗಿ ಪ್ರಾರ್ಥನೆ ನಡೆಯುತ್ತಿದೆ ಹಾಗೂ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು. “ಕನ್ವರ್ಟ್ ಮಾಡಲು ಒಪ್ಪದಿದ್ದಕ್ಕೆ ಕೊಲೆ ಮಾಡಲಾಗಿದೆ” ಎಂಬ ಶಂಕೆಯೂ ಸಂಘಟನೆ ಆರೋಪಿಸಿದೆ.
ಘಟನೆಯ ಕುರಿತು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಗದಗ ಎಸ್‌ಪಿ ರೋಹನ್ ಜಗದೀಶ್ ಅವರು, “ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣವಾಗಿದ್ದು, ತನಿಖೆ ನಂತರ ನಿಜಾಂಶ ಹೊರಬರಲಿದೆ” ಎಂದು ಮಾಹಿತಿ ನೀಡಿದ್ದಾರೆ.


