ಮಥುರಾ: ಇದು ಯೂಟ್ಯೂಬ್ ಯುಗ. ಯೂಟ್ಯೂಬ್ ನೋಡಿ ಹಲವರು ಏನೆನೋ ಸರ್ಕಸ್ ಮಾಡಲು ಮುಂದಾಗಿ ಯಡವಟ್ಟು ಮಾಡಿಕೊಳ್ತಾರೆ. ಇದೀಗ ಯೂಟ್ಯೂಬ್ ನೋಡಿ ಸರ್ಜರಿ ಮಾಡಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ರಾಜಾ ಬಾಬು ಎಂಬ ವ್ಯಕ್ತಿಗೆ ತುಂಬಾ ದಿನಗಳಿಂದ ಹೊಟ್ಟೆ ನೋವು ಬರುತ್ತಿತ್ತಂತೆ, ಹಲವು ವೈದ್ಯರನ್ನು ಸಂಪರ್ಕಿಸಿದರೂ ಸಮಸ್ಯೆ ಪರಿಹಾರವಾಗದಿದ್ದಾಗ ತನಗೆ ತಾನೇ ಸರ್ಜರಿ ಮಾಡಿಕೊಳ್ಳುವುದು ಸೂಕ್ತ ಎಂದು ನಿರ್ಧರಿಸಿ ಯೂಟ್ಯೂಬ್‌ನಲ್ಲಿ ಹಲವಾರು ವೀಡಿಯೊಗಳನ್ನು ನೋಡಿದ ನಂತರ, ಔಷಧ ಅಂಗಡಿಯಿಂದ ಔಷಧಿಗಳನ್ನು ಖರೀದಿ ಮಾಡಿದ್ದಾನೆ.
ನಂತರ ಯೂಟ್ಯೂಬ್‌ನಲ್ಲಿ ನೋಡಿದ ಆಧಾರದ ಮೇಲೆ ಸ್ವತಃ ಶಸ್ತ್ರಚಿಕಿತ್ಸೆಗೆ ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ಆರೋಗ್ಯ ಹದಗೆಟ್ಟಿದ್ದು ತಕ್ಷಣವೇ ಕುಟುಂಬಸ್ಥರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅರವಳಿಕೆ ಪಡೆದು ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಮುಂದಾಗಿದ್ದರಿಂದ ಮೊದಲಿಗೆ ಆತನಿಗೆ ಯಾವುದೇ ನೋವು ಕಾಣಿಸಿಕೊಂಡಿಲ್ಲ. ಆದ್ರೆ ಸ್ವಲ್ಪ ಸಮಯದ ಬಳಿಕ ಅರವಳಿಕೆ ಪರಿಣಾಮ ಕಡಿಮೆಯಾದಾಗ ತೀವ್ರ ನೋವು ಶುರುವಾಗಿ ಕಿರುಚಾಡಲು ಪ್ರಾರಂಭಿಸಿದ್ದಾನೆ. ತಕ್ಷಣವೇ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮಾರು 18 ವರ್ಷಗಳ ಹಿಂದೆ ರಾಜಾ ಬಾಬು ಅವರಿಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ಮನೆಯವರು ತಿಳಿಸಿದ್ದಾರೆ. ಸದ್ಯ ರಾಜಾ ಬಾಬು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.